Anant Ambani: ಲಾಲ್‌ಬಾಗ್ ಗಣಪತಿಗೆ 20 ಕೆ.ಜಿ ಚಿನ್ನದ ಕಿರೀಟ ಕೊಟ್ಟ ಅನಂತ್ ಅಂಬಾನಿ
ಮುಂಬೈನ ಪ್ರಸಿದ್ಧವಾದ ಲಾಲ್‌ಬೌಚಾ ಅಥವಾ ಲಾಲ್‌ಬಾಗ್ ಗಣೇಶ (ಕಿಂಗ್ ಆಫ್ ಲಾಲ್‌ಬಾಗ್) ಮೂರ್ತಿಗೆ ಅನಂತ್ ಅಂಬಾನಿ ಬರೋಬ್ಬರಿ 20 ಕೆ.ಜಿ ತೂಕದ ಚಿನ್ನದ ಕಿರೀಟ ನೀಡಿದ್ದಾರೆ. ಮುಂಬೈನಲ್ಲಿ ಲಾಲ್‌ಬಾಗ್ ಗಣೇಶ ಭಾರಿ ಪ್ರಸಿದ್ಧವಾಗಿದೆ, ಲಕ್ಷಾಂತರ ಜನ ಈ ಗಣೇಶ ವಿಗ್ರಹದ ದರ್ಶನ ಪಡೆಯುತ್ತಾರೆ. ಅಂಬಾನಿ ಕುಟುಂಬ ಕೂಡ ಲಾಲ್‌ಬಾಗ್ ಗಣೇಶನ ಪರಮಭಕ್ತರಾಗಿದ್ದು, ಅನಂತ್ ಅಂಬಾನಿ ಈ ಬಾರಿ ವಿನಾಯಕನ ಹಬ್ಬಕ್ಕೆ ಮುನ್ನ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ್ದಾರೆ. ಇದರ ಬೆಲೆ ಸುಮಾರು 16 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮುಂಬೈನಲ್ಲಿ ಅತಿ ಪ್ರಸಿದ್ಧ ಲಾಲ್‌ಬಾಗ್ ರಾಜಾ ಗಣೇಶನ ವಿಗ್ರಹವನ್ನು ಇಂದು ಅನಾವರಣಗೊಳಿಸಲಾಯಿತು. ಗಣೇಶನ ಹಬ್ಬಕ್ಕೆ ಒಂದು ದಿನದ ಮುನ್ನ ಗಣೇಶನ ನೋಟ ಹೇಗಿದೆ ಎನ್ನುವದನ್ನು ಬಹಿರಂಗಪಡಿಸಲಾಗಿದೆ. ಗಣೇಶನ ವಿಗ್ರಹವನ್ನು ನೋಡಲು ಸಾವಿರಾರು ಭಕ್ತರು ಸೇರಿದ್ದರು.

ಲಾಲ್‌ಬಾಗ್ ಗಣೇಶ ವಿಗ್ರಹದ ಫೋಟೊ, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಬ್ಬದ ಸಂಪ್ರದಾಯ ಮತ್ತು ಭವ್ಯತೆಯ ಸಮ್ಮಿಲನವಾಗಿದೆ. ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಉಡುಗೊರೆಯಾಗಿ ನೀಡಿರುವ ಭವ್ಯವಾದ 20 ಕೆಜಿ ಚಿನ್ನದ ಕಿರೀಟವು ಇದೀಗ ಭಾರಿ ಗಮನ ಸೆಳೆಯುತ್ತಿದೆ.
15 ವರ್ಷಗಳಿಂದ ಸೇವೆ
ಅನಂತ್ ಅಂಬಾನಿ ಅವರು ಕಳೆದ 15 ವರ್ಷಗಳಿಂದ ಲಾಲ್‌ಬಾಗ್ ಗಣೇಶ ಉತ್ಸವದ ಜೊತೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ, ಈ ಮೊದಲು ಹಲವು ಬಾರಿ ಇಲ್ಲಿನ ಗಣೇಶೋತ್ಸವಕ್ಕೆ ಅವರು ಸಾಕಷ್ಟು ಕಾಣಿಕೆ ನೀಡಿದ್ದಾರೆ. ಪ್ರತಿ ವರ್ಷ ಕೂಡ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ.
ಅನಂತ್ ಅಂಬಾನಿ ಕಿರೀಟ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಲಾಲಾಬೌಚಾ ಸಾರ್ವಜನಿಕ ಗಣೇಶೋತ್ಸವ ಮಂಡಲದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಬಾಳಾಸಾಹೇಬ್ ಸುದಂ ಕಾಂಬಳೆ, "ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಮತ್ತು ಗುಜರಾತ್‌ನ ಜಾಮ್‌ನಗರದ ವಂತರಾ ಸಂಸ್ಥಾಪಕ ಅನಂತ್ ಅಂಬಾನಿ ಅವರು 15 ವರ್ಷಗಳಿಂದ ನಮ್ಮ ಮಂಡಲಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅನಂತ್ ಅಂಬಾನಿ ಈ ಬಾರಿ 16 ಕೋಟಿ ರೂಪಾಯಿ ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ದಾನವಾಗಿ ನೀಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಅನಂತ್ ಅಂಬಾನಿ ಅವರನ್ನು ಲಾಲಾಬೌಚಾ ಸಾರ್ವಜನಿಕ ಗಣೇಶೋತ್ಸವ ಮಂಡಲದ ಕಾರ್ಯಕಾರಿ ಸಮಿತಿಯ ಪ್ರಧಾನ ಸಲಹೆಗಾರರಾಗಿ ಆಯ್ಕೆ ಮಾಡಲಾಗಿದೆ ಎಂದು ಬಾಳಾಸಾಹೇಬ್ ಮಾಹಿತಿ ನೀಡಿದ್ದಾರೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಪ್ರತಿ ವರ್ಷವೂ ಗಣೇಶ ಭಕ್ತರಿಗೆ ನೀರು ಮತ್ತು ಉಪಾಹಾರ ನೀಡುತ್ತಾರೆ ಎಂದರು.
ಮುಂಬೈನ ಪುತ್ಲಾಬಾಯಿ ಚಾಲ್‌ನಲ್ಲಿರುವ ಈ ಗಣೇಶ ಕೂರಿಸುವ ಆಚರಣೆಯನ್ನು 1934 ರಲ್ಲಿ ಆರಂಭಿಸಲಾಯಿತು ಮತ್ತು ಪ್ರತಿ ವರ್ಷ, ಈ ಗಣೇಶೋತ್ಸವ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ಕೂಡ ಸೆಪ್ಟೆಂಬರ್ 7, 2024 ರ ಶನಿವಾರದಿಂದ ಸೆಪ್ಟೆಂಬರ್ 17, 2024 ರ ಮಂಗಳವಾರದವರೆಗೆ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ.












Click it and Unblock the Notifications