ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಭಾರತದಲ್ಲಿ ನೆಲೆಯೇ ಇಲ್ಲ, ದಕ್ಷಿಣ ಭಾರತದಲ್ಲಿ ಬಿಜೆಪಿ ನಾಪತ್ತೆ!
ಪಂಚರಾಜ್ಯ ಚುನಾವಣೆ ಫಲಿತಾಂಶ ಬಹುತೇಕ ಮುಕ್ತಾಯದ ಹಂತ ತಲುಪಿದ್ದು ಈಗಾಗಲೇ ಬಿಜೆಪಿ 3 ರಾಜ್ಯಗಳಲ್ಲಿ ಗೆದ್ದು ಬೀಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯದ ವಿಧಾನಸಭೆ ಅಧಿಕಾರ ಈಗ ಬಿಜೆಪಿ ಪಾಲಾಗಿದೆ. ಆದರೆ ಇದೇ ಸಮಯದಲ್ಲಿ, ಮತ್ತೊಂದು ಗಂಭೀರ ಚರ್ಚೆ ಶುರುವಾಗಿದೆ. ಉತ್ತರ ಭಾರತ VS ದಕ್ಷಿಣ ಭಾರತ ಎಂಬ ಮಾತು ಮತ್ತೆ ಮುನ್ನೆಲೆಗೆ ಬಂದು ನಿಂತಿದೆ.
ಲೋಕಸಭೆ ಚುನಾವಣೆ ಹಣೆಬರಹ ನಿರ್ಧರಿಸುವ ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್‌ಗೆ ಭಾರಿ ಆಘಾತ ಎದುರಾಗಿದೆ. ಅದ್ರಲ್ಲೂ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ಹಿನ್ನಡೆ ಅನುಭವಿಸಿದೆ. ಈಗ ಅಧಿಕಾರದಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಈ ಮೂಲಕ, ಉತ್ತರ ಭಾರತದಲ್ಲಿ ಕಾಂಗ್ರೆಸ್ ತನ್ನ ಸ್ಥಾನ ಖಾಲಿ ಮಾಡಿಕೊಂಡಿದೆ. ಇದೇ ರೀತಿ ಬಿಜೆಪಿಗೆ ಕೂಡ ದಕ್ಷಿಣ ಭಾರತದಿಂದ ಜಾಗ ಖಾಲಿ ಆಗಿದೆ!

ಇಂಡಿಯಾ ಒಕ್ಕೂಟ VS ಎನ್‌ಡಿಎ ಒಕ್ಕೂಟ!
ಒಂದು ಕಾಲದಲ್ಲಿ ಇಡೀ ದೇಶದಲ್ಲಿ ಎಲ್ಲ ರಾಜ್ಯದಲ್ಲೂ ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಕಾಂಗ್ರೆಸ್‌ಗೆ ನೆಲೆ ಇರುವುದು ಕೆಲವೇ ಕೆಲವು ರಾಜ್ಯದಲ್ಲಿ. ಅದರಲ್ಲೂ ಉತ್ತರ ಭಾರತದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರ ರಚಿಸಿದ್ದ, ಕೆಲವೇ ರಾಜ್ಯಗಳ ಪೈಕಿ ಒಂದಾದ ರಾಜಸ್ಥಾನ ಕೂಡ ಕೈತಪ್ಪಿದೆ. ಇನ್ನೊಂದು ಕಡೆ ಈಗ ಮಧ್ಯ ಭಾರತದ ಛತ್ತೀಸ್‌ಗಢ ಕೂಡ ಖಾಲಿ ಆಗಿದೆ. ಇದರ ಜೊತೆಗೆ ಮಧ್ಯಪ್ರದೇಶ ಕೂಡ ಕಾಂಗ್ರೆಸ್‌ಗೆ ಶಾಕ್ ಕೊಟ್ಟಿದೆ. ಈ ಹಿನ್ನೆಲೆ ಉತ್ತರ ಭಾರತದಿಂದ ಕಾಂಗ್ರೆಸ್ ಭಾಗಶಃ ಖಾಲಿ ಆಗಿದ್ದು, ಹಿಮಾಚಲ ಪ್ರದೇಶ ಒಂದು ಮಾತ್ರ ಈಗ ಕಾಂಗ್ರೆಸ್ ಕೈಯಲ್ಲಿ ಉಳಿದಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ನಾಪತ್ತೆ!
ಒಂದು ಕಡೆ ಉತ್ತರ ಭಾರತದಲ್ಲಿ ಹೇಗೆ ಕಾಂಗ್ರೆಸ್ ನಾಪತ್ತೆ ಆಗಿದೆಯೋ, ಅದೇ ರೀತಿ ಇಲ್ಲಿ ಅಂದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿ ನಾಪತ್ತೆ ಆದಂತಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇದ್ದ ಏಕೈಕ ರಾಜ್ಯ ಅದು ಕರ್ನಾಟಕ, ಇಲ್ಲಿ ಕೂಡ ಬಿಜೆಪಿ ಸೋತಿರುವ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಆದರೆ ಮಧ್ಯ ಭಾರತ & ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿ ಹವಾ ಮುಂದುವರಿದಿದೆ. ಅದರಲ್ಲೂ ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ್, ಹರ್ಯಾಣ ರಾಜ್ಯಗಳಲ್ಲಿ ಬಿಜೆಪಿ ಹವಾಗೆ ಮತದಾರ ಫಿದಾ ಆಗಿದ್ದಾನೆ.

ಪಂಚರಾಜ್ಯ ಚುನಾವಣೆ ಆಘಾತ!
ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಎಲೆಕ್ಷನ್ ನಡೆದಿದ್ದು ಇಂದು 4 ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಹೀಗೆ ಹೊರಬಿದ್ದಿರುವ 4 ರಾಜ್ಯದ ರಿಸಲ್ಟ್ ಪೈಕಿ ಈಗಾಗಲೇ ರಾಜಸ್ಥಾನ & ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಕಂಡಿದೆ. ಛತ್ತೀಸ್‌ಗಢ ಅಖಾಡದಲ್ಲೂ ಕಾಂಗ್ರೆಸ್‌ಗೆ ಸೋಲು ಕರುಣಿಸುತ್ತಿದೆ ಬಿಜೆಪಿ. ಈ ಸಮಯದಲ್ಲೇ ಸೋಲಿನ ಪರಿಣಾಮ ಕಾಂಗ್ರೆಸ್ ನಾಯಕರು ಕೈಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಸಿಎಂಗೂ ಸೋಲಿನ ಭೀತಿ ಎದುರಾಗಿದೆ
ಛತ್ತೀಸ್‌ಗಢ ರಾಜ್ಯದಲ್ಲಿ ಹಾಲಿ ಸಿಎಂ & ಕಾಂಗ್ರೆಸ್ ಅಭ್ಯರ್ಥಿ ಭೂಪೇಶ್ ಬಘೇಲ್ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಹೀಗೆ ಭಾಗಶಃ ಛತ್ತೀಸ್‌ಗಢ ಬಿಜೆಪಿ ತೆಕ್ಕೆಗೆ ಬಿದ್ದಂತಾಗಿದ್ದು, ಇನ್ನೇನು ಕೆಲ ಕ್ಷಣದಲ್ಲಿ ಅಂತಿಮ ರಿಸಲ್ಟ್ ಹೊರಬೀಳಲಿದೆ. ಹೀಗಾಗಿ, ದೊಡ್ಡ ಅಂತರದ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಇದ್ದ ಕಾಂಗ್ರೆಸ್ ವರಿಷ್ಠರಿಗೆ ಭಾರಿ ಶಾಕ್ ಸಿಕ್ಕಂತಾಗಿದೆ. ಕಾಂಗ್ರೆಸ್‌ನ, ಛತ್ತೀಸ್‌ಗಢ ನಾಯಕರು ಕೂಡ ಇದೀಗ ಚಿಂತೆಯಲ್ಲಿ ಮುಳುಗಿದ್ದಾರೆ. ಇದರ ಜೊತೆ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಪರಿಸ್ಥಿತಿಯೂ ಹೀಗೆ ಆಗಿದೆ.












Click it and Unblock the Notifications