ಪಂಜಾಬ್; ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಶರಣು
ನವದೆಹಲಿ, ಏಪ್ರಿಲ್ 23; ತಲೆಮರೆಸಿಕೊಂಡಿದ್ದ ಖಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಪೊಲೀಸರ ಮುಂದೆ ಶರಣಾಗಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪಂಜಾಬ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಅಮೃತ್‌ಪಾಲ್ ಸಿಂಗ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಅಮೃತ್‌ಪಾಲ್ ಸಿಂಗ್ ಪಂಜಾಬ್ ನ ಮೊಗ ಪ್ರದೇಶದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಎನ್‌ಡಿಟಿವಿ ಭಾನುವಾರ ಬೆಳಗ್ಗೆ ವರದಿ ಮಾಡಿದೆ. ಮಾರ್ಚ್ 18ರಿಂದ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡು ಅಮೃತ್‌ಪಾಲ್ ಸಿಂಗ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಪೊಲೀಸರ ಮುಂದೆ ಶರಣಾದ ಅಮೃತ್‌ಪಾಲ್ ಸಿಂಗ್‌ರನ್ನು ಪೊಲೀಸರು ವಶಕ್ಕೆ ಪಡೆದು ಅಸ್ಸಾಂಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಅಮೃತ್‌ಪಾಲ್ ಸಿಂಗ್‌ನ 8 ಬೆಂಬಲಿಗರನ್ನು ಈಗಾಗಲೇ ಬಂಧಿಸಲಾಗಿದ್ದು, ಅವರು ಅಸ್ಸಾಂನಲ್ಲಿದ್ದಾರೆ. ಆದ್ದರಿಂದ ಶರಣಾಗಿರುವ ಸಿಂಗ್‌ರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಪಂಜಾಬ್ ಸರ್ಕಾರ ಹಲವು ವರ್ಷಗಳಿಂದ ಅಮೃತ್‌ಪಾಲ್ ಸಿಂಗ್ ಖಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿತ್ತು. ಅವರದ್ದೇ ಆದ ಗುಂಪು ಕಟ್ಟಿಕೊಂಡು ದೇಶದ ಸುರಕ್ಷತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪ ಮಾಡಿತ್ತು. ಮಾರ್ಚ್‌ನಲ್ಲಿ ಆತ ಪರಾರಿಯಾದ ಬಳಿಕ ಹುಡುಕಾಟಕ್ಕೆ ವಿಶೇಷ ತಂಡಗಳನ್ನು ರಚನೆ ಮಾಡಿತ್ತು. ಅಲ್ಲದೇ ಅಮೃತ್‌ಪಾಲ್ ಸಿಂಗ್ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿತ್ತು.

ಮಹಿಳೆಯ ಬಂಧನ; ಅಮೃತ್‌ಪಾಲ್ ಸಿಂಗ್ ಹುಡುಕಾಟದಲ್ಲಿದ್ದ ಪೊಲೀಸರು ಹರ್ಯಾಣದ ಕುರಕ್ಷೇತ್ರ ಜಿಲ್ಲೆಯಲ್ಲಿ ಬಲ್ಜೀತ್ ಕೌರ್ ಎಂಬ ಮಹಿಳೆಯನ್ನು ಬಂಧಿಸಿದ್ದರು. ತನ್ನ ಮನೆಯಲ್ಲಿ ಅಮೃತ್‌ಪಾಲ್ ಸಿಂಗ್ ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿತ್ತು. ಹರ್ಯಾಣದಿಂದ ನೇಪಾಳಕ್ಕೆ ಅಮೃತ್‌ಪಾಲ್ ಸಿಂಗ್ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು, ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.
ಕೆಲವು ದಿನಗಳ ಹಿಂದೆ ಪಂಜಾಬ್ ಪೊಲೀಸರು ಸಿನಿಮಾ ಮಾದರಿಯಲ್ಲಿ ಸುಮಾರು 50 ಕಾರುಗಳಲ್ಲಿ ಅಮೃತ್‌ಪಾಲ್ ಸಿಂಗ್ ಹಿಂಬಾಲಿಸಿದ್ದರು. ಆದರೆ ಆತ ತಪ್ಪಿಸಿಕೊಂಡಿದ್ದ. ಅಮೃತ್ ಪಾಲ್ ಸಿಂಗ್ ಬಂಧಿಸಲು ವಿಫಲರಾದ ಪೊಲೀಸರನ್ನು ಪಂಜಾಬ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಅಮೃತ್‌ಪಾಲ್ ಸಿಂಗ್ ಖಾಸಗಿ ಭದ್ರತಾ ಸಿಬ್ಬಂದಿಯಾದ ತೇಜಿಂದರ್ ಸಿಂಗ್ ಗಿಲ್‌ರನ್ನು ಸಹ ಪೊಲೀಸರು ಬಂಧಿಸಿದ್ದರು.
ವಿಡಿಯೋ ಬಿಡುಗಡೆ; ಪೊಲೀಸರ ಕೈಗೆ ಸಿಗದ ಅಮೃತ್‌ಪಾಲ್ ಸಿಂಗ್ ಅಜ್ಞಾತ ಸ್ಥಳದಿಂದ ಮಾರ್ಚ್ 30ರಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ. ಸಿಖ್ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಬೈಸಾಖಿಯಲ್ಲಿ 'ಸರಬತ್ ಖಾಲಸಾ' ಸಭೆ ಕರೆ ನೀಡಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ಘೋಷಣೆ ಹೇಳಿದ್ದ.
ಪಂಜಾಬ್ ಸರ್ಕಾರ ನನ್ನನ್ನು ಬಂಧಿಸಲು ಪ್ರಯತ್ನ ನಡೆಸಿದ್ದರೆ ನನ್ನ ಮನೆಗೆ ಬರುತ್ತಿದ್ದರು. ಆಗ ನಾನು ಶರಣಾಗಿ ಬಿಡುತ್ತಿದ್ದೆ. ಆದರೆ ನನ್ನ ವಿರುದ್ಧ ಪೊಲೀಸರು ಕೈಗೊಂಡಿರುವ ಕ್ರಮ ಸಿಖ್ ಸಮುದಾಯದ ಮೇಲಿನ ದಾಳಿ ಎಂದು ಅಮೃತ್‌ಪಾಲ್ ಸಿಂಗ್ ವಿಡಿಯೋದಲ್ಲಿ ಪೊಲೀಸರ ವಿರುದ್ದ ಆರೋಪ ಮಾಡಿದ್ದ. ನನಗೆ ಪೊಲೀಸರಿಂದ ಬಂಧನಗೊಳ್ಳುವ ಭಯ ಮೊದಲೂ ಇರಲಿಲ್ಲ. ಈಗಲೂ ಇಲ್ಲ ಎಂದು ವಿಡಿಯೋ ಕ್ಲಿಪ್‌ನಲ್ಲಿ ಆತ ತಿಳಿಸಿದ್ದ.
ಮಾರ್ಚ್ 18ರಂದು ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಕಾರ್ಯಾಚರಣೆ ಆರಂಭವಾಗಿತ್ತು. ಆತ ಪೊಲೀಸರಿಗೆ ಶರಣಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಏಪ್ರಿಲ್ 23ರಂದು ಆತ ಶರಣಾಗಿದ್ದಾನೆ ಎಂದು ರಾಷ್ಟ್ರೀಯ ಮಾಧ್ಯಮಗಳು ಹೇಳಿವೆ. 30 ವರ್ಷದ ಅಮೃತ್‌ಪಾಲ್ ಸಿಂಗ್ ಬಂಧಿಸಲು ಪಂಜಾಬ್ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದ್ದರು. ಪಂಜಾಬ್‌ನ ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದರು.












Click it and Unblock the Notifications