Amit Shah: ಪಹಲ್ಗಾಮ್ ದಾಳಿ; ಪ್ರತಿ ಭಯೋತ್ಪಾದಕರನ್ನೂ ಭಾರತ ಭೇಟೆಯಾಡುತ್ತದೆ ಎಂದ ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ದಾಳಿ ಮಾಡಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪದೇ ಪದೇ ಉಗ್ರರ ದಾಳಿಗೆ ಭಾರತ ತಕ್ಕ ಪ್ರತಿಕ್ರಿಯೆ ಕೊಡಬೇಕು ಎಂದು ಭಾರತೀಯ ಜನತೆ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಅದಕ್ಕೆ ತಕ್ಕಂತೆ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದೀಗ ಕೇಂದ್ರ ಗೃಹಸಚಿವ ಅಮಿತ್ ಶಾ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಕೊಂದಿರುವ ಪ್ರತಿಯೊಬ್ಬ ಭಯೋತ್ಪಾದಕರನ್ನು ಭಾರತ ಭೇಟೆಯಾಡುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉಗ್ರರ ದಾಳಿ ಮಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಭಯೋತ್ಪಾದಕರಿಗೆ ಇನ್ನು ಉಳಿಗಾಲವಿಲ್ಲ ಎಂದು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಡೆಸಿದವರನ್ನು ಬಿಡುವುದಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತಿಯೊಬ್ಬ ಅಪರಾಧಿಯನ್ನು ನಾವು ಬೇಟೆಯಾಡುತ್ತೇವೆ. 26 ಜನರನ್ನು ಕೊಂದು ನೀವು ಗೆದ್ದಿದ್ದೀರಿ ಎಂದು ಭಾವಿಸಬೇಡಿ. ನಿಮ್ಮಲ್ಲಿ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಅಸ್ಸಾಂನ ಬೋಡೋ ಸಮುದಾಯದ ನಾಯಕ ಉಪೇಂದ್ರ ನಾಥ್ ಬ್ರಹ್ಮ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಮತ್ತು ಅವರ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಹೇಳಿದರು.
ಇದು ನರೇಂದ್ರ ಮೋದಿ ಸರ್ಕಾರ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ದೇಶದ ಪ್ರತಿ ಮೂಲೆಯಿಂದಲೂ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪವಾಗಿದೆ. ಅದನ್ನು ನಾವು ಮಾಡಿಯೇ ತೀರುತ್ತೇವೆ ಎಂದಿದ್ದಾರೆ.
ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಸ್ಮರಣಾರ್ಥ ಗೃಹ ಸಚಿವರು, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇತರ ಅಧಿಕಾರಿಗಳೊಂದಿಗೆ ಮಾನಾಚರಣೆ ಮಾಡಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಪ್ರಮೋದ್ ಬೊರೊ ಕೂಡ ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಡಿಯಲ್ಲಿ ಉದ್ವಿಗ್ನತೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕಳೆದ ವಾರ ನಡೆದ ಸಿಸಿಎಸ್‌ನ ಮೊದಲ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ (ಸಿಸಿಎಸ್)ಗೆ ಭಯೋತ್ಪಾದಕರ ಗಡಿಯಾಚೆಗಿನ ಸಂಪರ್ಕದ ಬಗ್ಗೆ ಮಾಹಿತಿ ನೀಡಲಾಗಿದೆ.
ಭಾರತ ಈ ಬಾರಿ ಸುಮ್ಮನೆ ಇರಬಾರದು ಪಾಕ್ ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯಬೇಕು. ಬರೀ ಎಚ್ಚರಿಕೆ ಕೊಡುವುದರಿಂದ ಭಯೋತ್ಪಾದನೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದು ಜನ ಒತ್ತಾಯಿಸಿದ್ದಾರೆ. ಯಾವುದೇ ಕ್ರಮ ತೆಗೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಿದ್ದಾರೆ.












Click it and Unblock the Notifications