ಶಾಂತಿ ಕಾಪಾಡಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿರುವ ಗೃಹ ಸಚಿವ ಅಮಿತ್ ಶಾ
ಗುವಾಹಟಿ, ಮೇ. 25: ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಮನವಿ ಮಾಡಿದ್ದು, ಶೀಘ್ರದಲ್ಲೇ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಎರಡೂ ಸಮುದಾಯಗಳ ಜನರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
"ನ್ಯಾಯಾಲಯದ ತೀರ್ಪಿನ ನಂತರ ಮಣಿಪುರದಲ್ಲಿ ಘರ್ಷಣೆಗಳು ನಡೆದಿವೆ. ನಾನು ಎರಡೂ ಗುಂಪುಗಳಿಗೆ ಮನವಿ ಮಾಡುತ್ತೇನೆ, ಅವರು ಶಾಂತಿಯನ್ನು ಕಾಪಾಡಬೇಕು ಮತ್ತು ಎಲ್ಲರಿಗೂ ನ್ಯಾಯ ಸಿಗುತ್ತದೆ. ಕೆಲವು ದಿನಗಳ ನಂತರ ನಾನೇ ಮಣಿಪುರಕ್ಕೆ ಹೋಗುತ್ತೇನೆ ಮತ್ತು ಮೂರು ದಿನಗಳ ಕಾಲ ಅಲ್ಲಿಯೇ ಇರುತ್ತೇನೆ ಮತ್ತು ಶಾಂತಿ ಸ್ಥಾಪನೆಗಾಗಿ ಮಣಿಪುರದ ಜನರೊಂದಿಗೆ ಮಾತನಾಡುತ್ತೇನೆ ಎಂದು ಅವರು ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಮಣಿಪುರದಲ್ಲಿ ಹೊಸ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದರಿಂದ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮಣಿಪುರದಲ್ಲಿ ಈ ತಿಂಗಳು ನಡೆದ ಜನಾಂಗೀಯ ಹಿಂಸಾಚಾರದ ಸ್ಫೋಟದಲ್ಲಿ ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ನಿರಾಶ್ರಿತರಾಗಿದ್ದಾರೆ. ರಾಜ್ಯಾದ್ಯಂತ ಸುಮಾರು 2,000 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಬುಧವಾರವಷ್ಟೇ ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ನೆಲೆಸುವ ಪ್ರಯತ್ನವಾಗಿ ಮಣಿಪುರದ ಸಮುದಾಯದ ಮುಖಂಡರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಕರೆಯಬೇಕು.ಮ್ಯಾನ್ಮಾರ್‌ನೊಂದಿಗೆ ಅಂತರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ದರೆ ಹೆಚ್ಚು ಅಪಾಯವಾಗಲಿದೆ ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.

ಮೇ 3 ರಂದು ಮಣಿಪುರದಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಒತ್ತಾಯಿಸಿ ಮೈತೇಯಿ ಸಮುದಾಯದ ಪ್ರತಿಭಟನೆ ನಡೆಸಲು 10 ಗುಡ್ಡಗಾಡು ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿವೆ. ಇವರಿಗೆ ಮಿಸಲಾತಿ ನೀಡಿದರೇ ಸರ್ಕಾರಿ ಉದ್ಯೋಗಗಳು ಮತ್ತು ಹಲವು ಸವಲತ್ತುಗಳಲ್ಲಿ ತಮಗೆ ಕಡಿತವಾಗಲಿದೆ ಎಂದು ಕುಕಿ ಬುಡಕಟ್ಟು ಸಮುದಾಯ ಪ್ರತಿರೋಧ ವ್ಯಕ್ತಪಡಿಸಿದೆ.
ಪ್ರಸ್ತುತ ಕುಕಿ ಮತ್ತು ಇತರ ಬುಡಕಟ್ಟು ಗುಂಪುಗಳಿಗೆ ಮೀಸಲಿಟ್ಟಿರುವ ಪ್ರದೇಶಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮೈತೇಯಿ ಸಮುದಾಯ ಹೊಂಷು ಹಾಕುತ್ತಿದೆ ಎಂಬ ಆತಂಕದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದ ಬೆನ್ನಲ್ಲೇ ಸೇನೆಯು ರಾಜ್ಯಕ್ಕೆ ಸಾವಿರಾರು ಪಡೆಗಳನ್ನು ನಿಯೋಜಿಸಿದೆ. ಅಲ್ಲಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಹಲವಾರು ವಾರಗಳವರೆಗೆ ಇಂಟರ್ನೆಟ್ ಅನ್ನು ಕಡಿತಗೊಳಿಸಲಾಗಿದೆ.
ಶಂಕಿತ ಉಗ್ರರು ಜನರ ಗುಂಪಿನ ಮೇಲೆ ಗುಂಡು ಹಾರಿದ ಬಳಿಕ ವ್ಯಕ್ತಿಯೊಬ್ಬರು ಮಾರಣಾಂತಿಕವಾಗಿ ಗಾಯಗೊಂಡ ನಂತರ ಬಿಷ್ಣುಪುರ್ ಜಿಲ್ಲೆಯಲ್ಲಿ ಬುಧವಾರ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ. "ಉಗ್ರರ ಗುಂಡಿನ ದಾಳಿಯಲ್ಲಿ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು" ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಮುನ್ನ ಶಂಕಿತ ಉಗ್ರಗಾಮಿಗಳು ಹಿಂಸಾಚಾರದ ಸಂದರ್ಭದಲ್ಲಿ ಸ್ಥಳಾಂತರಗೊಂಡವರಿಗಾಗಿ ಸ್ಥಾಪಿಸಲಾದ ಪರಿಹಾರ ಶಿಬಿರದ ಸಮೀಪವೇ ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯ ಸಚಿವ ಗೋವಿಂದಸ್ ಕೊಂತೌಜಂ ಅವರ ಮನೆಯ ಮೇಲೂ ದಾಳಿ ನಡೆಸಿ, ಕುಟುಂಬಸ್ಥರು ಇಲ್ಲದಿದ್ದಾಗ ದಾಂಧಲೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications