ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಅಮಿತ್ ಶಾ
ಕೋಲ್ಕತ್ತಾ, ಜುಲೈ. 16: ರಾಜ್ಯದಲ್ಲಿ ಹಿಂಸಾಚಾರ ಮತ್ತು ಈಗಷ್ಟೇ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯ ಒಂದು ತಿಂಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯ ಮತಗಳ ಹಂಚಿಕೆಯಲ್ಲಿ 16% ರಷ್ಟು ತೀವ್ರ ಕುಸಿತ ಕಂಡಿದೆ.
ಶುಕ್ರವಾರ ದೆಹಲಿಯಲ್ಲಿಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ರಾಷ್ಟ್ರ ರಾಜಧಾನಿಯಿಂದ ಆಗಮಿಸಿದ ನಂತರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಿಂದ ಒಂದೇ ಒಂದು ಸಾವು ಸಂಭವಿಸುವುದನ್ನು ಅಮಿತ್ ಶಾ ಬಯಸುವುದಿಲ್ಲ ಎಂದಿದ್ದಾರೆ.

ಜೂನ್ 8 ರಂದು ಚುನಾವಣಾ ದಿನಾಂಕವನ್ನು ಘೋಷಿಸಿದ ನಂತರ ಪಂಚಾಯತ್ ಚುನಾವಣೆ ಸಂಬಂಧಿತ ಹಿಂಸಾಚಾರದಲ್ಲಿ 39 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಸಂಬಂಧ ಹೊಂದಿದ್ದಾರೆ.
ಸುಕಾಂತ ಮಜುಂದಾರ್, "ಅಮಿತ್ ಜಿ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ದಿನಾಂಕವು ಅವರ ಕಾರ್ಯಕ್ರಮಗಳ ಮೇಲೆ ಅವಲಂಬಿತವಾಗಿರುತ್ತದೆ. ಅವರು ಬಂಗಾಳದ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಮರಳಬೇಕು ಎಂದು ಬಯಸುತ್ತಾರೆ. ಇನ್ನು ಮುಂದೆ ಯಾವುದೇ ಪಕ್ಷದಿಂದಲೂ ಒಂದು ಸಾವು ಸಂಭವಿಸಬಾರದು ಎಂದು ಅಮಿತ್ ಶಾ ಬಯಸುತ್ತಾರೆ" ಎಂದು ತಿಳಿಸಿದ್ದಾರೆ.
"ಜುಲೈ 8 ರಂದು ಪಂಚಾಯತ್ ಚುನಾವಣೆ ನಡೆದ ನಂತರ ಕೇಂದ್ರ ಪಡೆಗಳನ್ನು ನಿಯೋಜಿಸದಿದ್ದರೆ ಸಾವುನೋವುಗಳ ಸಂಖ್ಯೆ ಹೆಚ್ಚಾಗುತ್ತಿತ್ತು .ಅಮಿತ್ ಜಿ ಪಡೆಗಳ ನಿಯೋಜನೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಕೆಲ ಕಾಲ ರಾಜ್ಯದಲ್ಲಿ ಕೇಂದ್ರ ಪಡೆಗಳು ಬೀಡು ಬಿಡಲಿವೆ" ಎಂದು ಮಾಹಿತಿ ನೀಡಿದ್ದಾರೆ.

ಟಿಎಂಸಿ ರಾಜ್ಯಸಭಾ ಸಂಸದ ಮತ್ತು ಪಕ್ಷದ ವಕ್ತಾರ ಸಂತಾನು ಸೇನ್ ಅವರು ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್ ಮತ್ತು ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅವರ "ಬೇಜವಾಬ್ದಾರಿ ಮತ್ತು ಪ್ರಚೋದನಕಾರಿ" ಹೇಳಿಕೆಗಳಿಂದಾಗಿ ಹಿಂಸಾಚಾರ ಸಂಭವಿಸಿದೆ. ಅಮಿತ್ ಶಾ ಅವರು ಈ ನಾಯಕರನ್ನು ನಿಯಂತ್ರಿಸಬೇಕು. ಪಂಚಾಯತಿ ಚುನಾವಣೆ ಸಂಬಂಧಿತ ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಟಿಎಂಸಿಯವರು ಎಂದು ಆರೋಪಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್, "ಪಶ್ಚಿಮ ಬಂಗಾಳದಲ್ಲಿ ನಡೆದ ರಕ್ತಪಾತದ ಹಿಂಸಾಚಾರ ಕೂಡ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯ ಉತ್ತಮ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ. ಹಿಂದಿನ ಚುನಾವಣೆಗಿಂತ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ, ಇದು ಜನರು ಇಟ್ಟಿರುವ ನಂಬಿಕೆಯಲ್ಲಿ ಗಮನಾರ್ಹ ಏರಿಕೆಯನ್ನು ಸೂಚಿಸುತ್ತದೆ" ಎಂದಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಯ್ನು ಟೀಕಿಸಿರುವ ಟಿಎಂಸಿ "ಇದು ಅಸಹ್ಯಕರ ಮತ್ತು ಸಂವೇದನಾಶೀಲವಲ್ಲದ ಹೇಳಿಕೆ" ಎಂದು ಕರೆದಿದೆ . ಜೊತೆಗೆ ಕಲಹ ಪೀಡಿತ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಅವರ ಸಚಿವಾಲಯದ ಪಾತ್ರದ ಬಗ್ಗೆ ಪ್ರಶ್ನಿಸಿದೆ.












Click it and Unblock the Notifications