ತೆಲಂಗಾಣ ಬಿಜೆಪಿಯಲ್ಲಿ ಭಿನ್ನಮತ : ಅತೃಪ್ತಿ ಶಮನಕ್ಕಾಗಿ ಅಮಿತ್ ಶಾ, ಜೆಪಿ ನಡ್ಡಾ ಸರ್ಕಸ್!
ಹೈದರಾಬಾದ್, ಜೂನ್ 26: ತೆಲಂಗಾಣದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಬಿಜೆಪಿ ವರಿಷ್ಠರಾದ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಸ್ ನಡೆಸಿದ್ದಾರೆ.
ತೆಲಂಗಾಣದಲ್ಲಿ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್, ಈಟಲ ರಾಜೇಂದರ್, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ, ಶಾಸಕ ರಘುನಂದನ್ ರಾವ್, ವಿಜಯಶಾಂತಿ, ಮುರಳೀಧರ್ ರಾವ್, ಪೊಂಗುಲೇಟಿ ಸುಧಾಕರರೆಡ್ಡಿ ಮತ್ತಿತರರು ಜೊತೆಗೆ ಸಭೆ ನಡೆಸಿದ್ದು, ಪಕ್ಷದಲ್ಲಿ ಅಸಮಾಧಾನ ಶಮನಕ್ಕೆ ವರಿಷ್ಠರು ಪ್ರಯತ್ನ ನಡೆಸಿದ್ದಾರೆ.

ಆಡಳಿತಾರೂಢ ಬಿಆರ್‌ಎಸ್‌ಗೆ ಪ್ರಮುಖ ಸವಾಲಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿರುವ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ಪ್ರಭಾವಿ ನಾಯಕರನ್ನ ಕರೆತರುವ ಪ್ಲಾನ್ ನಡೆಸಿದೆ ಎಂದು ಹೇಳಲಾಗಿದೆ.
ಇನ್ನೂ ಸಭೆಯಲ್ಲಿ, ಈಟಲ ರಾಜೇಂದರ್ ಮತ್ತು ಸುಧಾಕರ ರೆಡ್ಡಿ ಅವರು ವಿಧಾನಸಭಾ ಚುನಾವಣೆಗೆ ಬಿಜೆಪಿಯ ಸಿದ್ಧತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ರಾಜ್ಯ ನಾಯಕತ್ವದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತೆಲಂಗಾಣದಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಪಕ್ಷದ ಸ್ಥಾನಮಾನ ಮತ್ತು ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಪ್ರಚಾರವನ್ನು ಹೆಚ್ಚಿಸುವ ಅಗತ್ಯವಿದೆ. ಅಮಿತ್ ಶಾ ಮತ್ತು ನಡ್ಡಾ ಅವರ ನಾಯಕತ್ವದ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತೇವೆ ಎಂದು ರಾಜೇಂದರ್ ಹೇಳಿದ್ದಾರೆ.
ಇನ್ನೂ ತೆಲಂಗಾಣದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ 2014ರಲ್ಲಿ ಬಿಆರ್‌ಎಸ್ ಅಸ್ತಿತ್ವಕ್ಕೆ ಬಂದ ನಂತರ ಅಧಿಕಾರದಲ್ಲಿದೆ. ಪ್ರಸ್ತುತ 119 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಮೂವರು ಶಾಸಕರನ್ನು ಹೊಂದಿದೆ. ಮೂವರಲ್ಲಿ ಒಬ್ಬರನ್ನು ಅಮಾನತು ಮಾಡಲಾಗಿದೆ. 2019 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಅಸ್ತಿತ್ವವನ್ನ ಉಳಿಕೊಂಡಿತ್ತು.
ಇನ್ನೂ ಈ ಕುರಿತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಮಾತನಾಡಿ, ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯೊಂದಿಗೆ (ಬಿಆರ್‌ಎಸ್) ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಭಾನುವಾರ ಹೇಳಿದ್ದಾರೆ. ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ವಿರುದ್ಧ ಗಂಭೀರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ನಾಯಕರಿಗೆ ತಿಳಿಸಿದರು.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುವಂತೆ ಪಕ್ಷದ ಮುಖಂಡರಿಗೆ ಸೂಚಿಸಿದ ಬಿಜೆಪಿ ಅಧ್ಯಕ್ಷರು, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರು ಶ್ರಮಿಸಬೇಕು ಎಂದು ತಿಳಿಸಿದರು.












Click it and Unblock the Notifications