ಇವಿಎಂ ಬಗ್ಗೆ ತಗಾದೆ ತೆಗೆದ ವಿರೋಧಿಗಳಿಗೆ ಅಮಿತ್ ಶಾ 6 ಪ್ರಶ್ನೆ
ನವದೆಹಲಿ, ಮೇ 22: ಚುನಾವಣೆ ಫಲಿತಾಂಶಕ್ಕೆ ಮುನ್ನಾ ಇವಿಎಂ ಬಗ್ಗೆ ತಕರಾರು ಎತ್ತಿರುವ ವಿರೋಧ ಪಕ್ಷಗಳಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆರು ಪ್ರಶ್ನೆಗಳನ್ನು ಕೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನಾಳೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಎಕ್ಸಿಟ್ ಪೋಲ್‌ಗಳಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಎಂಬ ವರದಿ ಹೊರಬೀಳುತ್ತಿದ್ದಂತೆ, ವಿಪಕ್ಷಗಳು ಇವಿಎಂ ಬಗ್ಗೆ ತಕರಾರು ಎತ್ತಿವೆ.
ಕಾಂಗ್ರೆಸ್ ಸೇರಿ ಬಹುತೇಕ ವಿರೋಧ ಪಕ್ಷಗಳು ನಿನ್ನೆ ದೆಹಲಿಯಲ್ಲಿ ಸಭೆ ನಡೆಸಿ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಇವಿಎಂ ಬಗ್ಗೆ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದು, ಆಯೋಗಕ್ಕೆ ದೂರು ಸಹ ನೀಡಿವೆ.
ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರನ್ನು ಬಿಜೆಪಿ ಟೀಕಿಸುತ್ತಲೇ ಬಂದಿದ್ದು, ಅಮಿತ್ ಶಾ ಅವರು ಇಂದು ಟ್ವಿಟ್ಟರ್‌ನಲ್ಲಿ ಇವಿಎಂ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವಿಎಂ ವಿರೋಧಿಗಳಿಗೆ ಆರು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.
ಅಮಿತ್ ಶಾ ಕೇಳಿರುವ ಆರು ಪ್ರಶ್ನೆಗಳು ಇಂತಿವೆ.
|
'ಇವಿಎಂ ಮೇಲೆ ನಂಬಿಕೆ ಇಲ್ಲದಿದ್ದರೆ ವಿಜಯ ಹೇಗೆ ಸ್ವೀಕರಿಸಿದಿರಿ'
ಪ್ರಶ್ನೆ 1: ಇವಿಎಂ ಬಗ್ಗೆ ಈಗ ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳು ಇವಿಎಂ ಬಳಸಿ ನಡೆಸಿದ ಒಂದಲ್ಲಾ ಒಂದು ಚುನಾವಣೆಯಲ್ಲಿ ಗೆಲುವು ಸಾಧಿಸಿವೆ, ಇವಿಎಂ ಮೇಲೆ ನಂಬಿಕೆ ಇಲ್ಲದಿದ್ದ ಮೇಲೆ ಅವು ಏಕೆ ಆ ವಿಜಯವನ್ನು ಒಪ್ಪಿಕೊಂಡವು ಮತ್ತು ಸರ್ಕಾರ ರಚಿಸಿದವು ಎಂದು ಪ್ರಶ್ನಿಸಿದ್ದಾರೆ.
|
ಸುಪ್ರಿಂಕೋರ್ಟ್ ತೀರ್ಪನ್ನು ವಿರೋಧಿಸುತ್ತೀರಾ?
ಪ್ರಶ್ನೆ 2: ದೇಶದ ಸರ್ವೋಚ್ಛ ನ್ಯಾಯಾಲಯವು ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಬಳಿಕ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ವಿವಿಪ್ಯಾಟ್‌ಗಳನ್ನು ತುಲನೆ ಮಾಡುವಂತೆ ಹೇಳಿದೆ. ಹಾಗಿದ್ದರೂ ನೀವು ಇವಿಎಂ ಅನ್ನು ವಿರೋಧಿಸುವಿರಾದರೆ, ನೀವು ಸರ್ವೋಚ್ಛ ನ್ಯಾಯಾಲಯವನ್ನು ವಿರೋಧಿಸಿದ ಹಾಗೆಯೇ ಅಲ್ಲವೇ?
|
ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ಏಕೆ?: ಅಮಿತ್ ಶಾ
ಪ್ರಶ್ನೆ 3: ಫಲಿತಾಂಶದ ಎರಡು ದಿನ ಹಿಂದೆ ವಿರೋಧ ಪಕ್ಷಗಳು ಚುನಾವಣಾ ಪ್ರಕ್ರಿಯೆಯನ್ನು ಬದಲಾಯಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೀರಿ, ಆದರೆ ಇದು ಎಲ್ಲ ಪಕ್ಷಗಳ ಒಪ್ಪಿಗೆ ಇಲ್ಲದೆ ಸಾಧ್ಯವಿಲ್ಲ, ಹಾಗಿದ್ದರೂ 22 ವಿರೋಧ ಪಕ್ಷಗಳು ಮಾತ್ರವೇ ಏಕೆ ಮನವಿ ಸಲ್ಲಿಸಿದಿರಿ?
|
'ಎಕ್ಸಿಟ್ ಪೋಲ್ ಬಂದ ಮೇಲೆ ಇವಿಎಂ ಮೇಲೆ ಅನುಮಾನ'
ಪ್ರಶ್ನೆ 4: ವಿಪಕ್ಷಗಳು ಮತದಾನದ ನಂತರ ಇವಿಎಂ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಆರಂಭಿಸಿದವು, ಎಕ್ಸಿಟ್ ಪೋಲ್ ನಂತರ ಇದು ಇನ್ನಷ್ಟು ಹೆಚ್ಚಾಯಿತು. ಸಮೀಕ್ಷೆಗಳನ್ನು ಮತದಾರರನ್ನು ಪ್ರಶ್ನಿಸಿ ಮಾಡಲಾಗುತ್ತದೆಯೇ ವಿನಃ ಇವಿಎಂ ಆಧಾರದಲ್ಲಿ ಅಲ್ಲ, ಹಾಗಿದ್ದ ಮೇಲೆ ಎಕ್ಸಿಟ್ ಪೋಲ್ ಫಲಿತಾಂಶದ ಆಧಾರದ ಮೇಲೆ ಏಕೆ ವಿಪಕ್ಷಗಳು ಇವಿಎಂ ಅನ್ನು ದೂಷಿಸುತ್ತಿವೆ?
|
'ಚುನಾವಣಾ ಆಯೋಗದ ಸವಾಲನ್ನೇಕೆ ಸ್ವೀಕರಿಸಲಿಲ್ಲ?'
ಪ್ರಶ್ನೆ 5: ಇವಿಎಂ ಅನ್ನು ಹ್ಯಾಕ್ ಮಾಡಬಹುದು ಎಂಬ ಸುದ್ದಿ ಹರಡಿದಾಗ, ಇವಿಎಂ ಅನ್ನು ಹ್ಯಾಕ್ ಮಾಡಲು ಚುನಾವಣೆ ಆಯೋಗವೇ ಸವಾಲು ಎಸೆದು, ಅದಕ್ಕೆ ಅವಕಾಶವನ್ನೂ ಕಲ್ಪಿಸಿತ್ತು ಆದರೆ ಆಗ ಏಕೆ ಯಾವ ವಿಪಕ್ಷಗಳೂ ಇದರಲ್ಲಿ ಭಾಗವಹಿಸಲಿಲ್ಲ? ಇವಿಎಂ ಹ್ಯಾಕ್ ಮಾಡಬಹುದು ಎಂದು ಏಕೆ ತೋರಿಸಲಿಲ್ಲ?
|
ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ: ಶಾ
ಪ್ರಶ್ನೆ 6: ಚುನಾವಣೆ ಫಲಿತಾಂಶ ತಮಗೆ ವ್ಯತಿರಿಕ್ತವಾಗಿ ಬಂದರೆ, ಆಯುಧ ಕೈಗೆತ್ತಿಕೊಳ್ಳುವ, ರಕ್ತದ ನದಿ ಹರಿಸುವ ಬಗ್ಗೆ ಮಾತನಾಡುತ್ತಿದ್ದಾರೆ, ವಿಪಕ್ಷಗಳು ಇದನ್ನು ಗಮನಿಸಬೇಕು, ಅವರು ಯಾರ ವಿರುದ್ಧ ಈ ಬಹಿರಂಗ ಬೆದರಿಕೆ ಹಾಕುತ್ತಿದ್ದಾರೆಂದು ವಿವರಿಸಬೇಕು ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.











Click it and Unblock the Notifications