Amaravati: ಆಂಧ್ರಪ್ರದೇಶದ ಶಾಶ್ವತ ರಾಜಧಾನಿಯಾಗಿ ಅಮರಾವತಿ: ಅಧಿಕೃತ ಘೋಷಣೆ
ಆಂಧ್ರಪ್ರದೇಶದ ರಾಜಧಾನಿ ವಿಚಾರದಲ್ಲಿದ್ದ ದಶಕದ ಗೊಂದಲಕ್ಕೆ ಈಗ ಅಧಿಕೃತವಾಗಿ ತೆರೆಬಿದ್ದಿದೆ. ದೀರ್ಘಕಾಲದ ರಾಜಕೀಯ ಮತ್ತು ಕಾನೂನು ಹೋರಾಟದ ನಂತರ, ಅಮರಾವತಿಯನ್ನು ಆಂಧ್ರಪ್ರದೇಶದ ಏಕೈಕ ರಾಜಧಾನಿಯನ್ನಾಗಿ ಕೇಂದ್ರ ಸರ್ಕಾರವು ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ಭಾರತ ಸರ್ಕಾರವು ಆಂಧ್ರಪ್ರದೇಶ ಮರುಸಂಘಟನೆ (ತಿದ್ದುಪಡಿ) ಕಾಯ್ದೆ-2026ಕ್ಕೆ ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ ಆಂಧ್ರಪ್ರದೇಶಕ್ಕೆ ಅಮರಾವತಿಯೇ ಏಕೈಕ ರಾಜಧಾನಿ ಎಂಬುದು ಈಗ ಕಾನೂನುಬದ್ಧವಾಗಿ ದೃಢಪಟ್ಟಿದೆ.
ರಾಷ್ಟ್ರಪತಿಗಳ ಅಂಕಿತ
ಏಪ್ರಿಲ್ 2026ರ ಮೊದಲ ವಾರದಲ್ಲಿ ಪಾರ್ಲಿಮೆಂಟ್‌ನ ಉಭಯ ಸದನಗಳಲ್ಲಿ ಈ ತಿದ್ದುಪಡಿ ಮಸೂದೆ ಅಂಗೀಕಾರವಾಯಿತು. ನಂತರ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಈ ಬಿಲ್‌ಗೆ ಸಹಿ ಹಾಕುವ ಮೂಲಕ ಇದು ಅಧಿಕೃತ ಕಾನೂನಾಗಿ ಜಾರಿಗೆ ಬಂದಿದೆ. ಈ ಹೊಸ ಕಾನೂನು 2024ರ ಜೂನ್ 2ರಿಂದಲೇ ಜಾರಿಗೆ ಬಂದಿದೆ ಎಂದು ಪರಿಗಣಿಸಲಾಗುತ್ತದೆ. ಹೈದರಾಬಾದ್ ನಗರವು ಆಂಧ್ರ ಮತ್ತು ತೆಲಂಗಾಣಕ್ಕೆ ಜಂಟಿ ರಾಜಧಾನಿಯಾಗಿದ್ದ 10 ವರ್ಷಗಳ ಅವಧಿ ಮುಗಿದ ದಿನಾಂಕವನ್ನೇ ಇದಕ್ಕೆ ಮೂಲವಾಗಿ ಇಟ್ಟುಕೊಳ್ಳಲಾಗಿದೆ. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ನಿರ್ಧಾರವನ್ನು "ಆಂಧ್ರಪ್ರದೇಶದ ಜನರ ಮತ್ತು ಅದರಲ್ಲೂ ಮುಖ್ಯವಾಗಿ ಅಮರಾವತಿ ರೈತರ ದೊಡ್ಡ ಗೆಲುವು" ಎಂದು ಬಣ್ಣಿಸಿದ್ದಾರೆ.

ಮೂರು ರಾಜಧಾನಿ ವಿವಾದಕ್ಕೆ ಅಂತ್ಯ
ಈ ಹಿಂದೆ ಇದ್ದ ವಿಶಾಖಪಟ್ಟಣಂ, ಅಮರಾವತಿ ಮತ್ತು ಕರ್ನೂಲ್ ಮೂರು ರಾಜಧಾನಿ ಪ್ರಸ್ತಾವನೆ ಈಗ ಸಂಪೂರ್ಣವಾಗಿ ರದ್ದಾಗಿದೆ. ರಾಜಧಾನಿ ಹೆಸರನ್ನು ನೇರವಾಗಿ ಮರುಸಂಘಟನೆ ಕಾಯ್ದೆಯಲ್ಲಿ ಸೇರಿಸಿರುವುದರಿಂದ, ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರ ಬಂದರೂ ಸುಲಭವಾಗಿ ರಾಜಧಾನಿಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ರಾಜಧಾನಿ ಯಾವುದು ಎಂಬ ಗೊಂದಲ ನಿವಾರಣೆಯಾಗಿರುವುದರಿಂದ, ಸ್ಥಗಿತಗೊಂಡಿದ್ದ ಅಮರಾವತಿಯ ಮೂಲಸೌಕರ್ಯ ಯೋಜನೆಗಳಿಗೆ ಮತ್ತು ಹೂಡಿಕೆಗಳಿಗೆ ಈಗ ಹೊಸ ಚೈತನ್ಯ ಸಿಕ್ಕಂತಾಗಿದೆ.
ಇದು ಜನರ ಗೆಲುವು: ಡಿಸಿಎಂ ಪವನ್ ಕಲ್ಯಾಣ್
ಆಂಧ್ರಪ್ರದೇಶದ ರಾಜಧಾನಿ ಗೊಂದಲಕ್ಕೆ ಪೂರ್ಣವಿರಾಮ ಬಿದ್ದಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಎಕ್ಸ್ ಪೋಸ್ಟ್ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ 6 ಆಂಧ್ರಪ್ರದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಅಮರಾವತಿಯು ರಾಜ್ಯದ ಅಧಿಕೃತ ರಾಜಧಾನಿಯಾಗಿ ಕೇಂದ್ರದಿಂದ ಮಾನ್ಯತೆ ಪಡೆದಿದೆ. ಇಷ್ಟು ದಿನಗಳ ಕಾಲ ರಾಜಧಾನಿ ಇಲ್ಲದೆ ಅನುಭವಿಸಿದ ಅನಿಶ್ಚಿತತೆ ಮತ್ತು ಭವಿಷ್ಯದ ಕುರಿತಾದ ಆತಂಕಗಳು ಈಗ ದೂರವಾಗಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮಹತ್ವದ ಮಸೂದೆಯನ್ನು ಅಂಗೀಕರಿಸಿದ ಸಂಸತ್ತು, ಗೆಜೆಟ್ ಅಧಿಸೂಚನೆ ಹೊರಡಿಸಿದ ಭಾರತ ಸರ್ಕಾರ ಮತ್ತು ಅಂಕಿತ ಹಾಕಿದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪವನ್ ಕಲ್ಯಾಣ್ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
The capital of Andhra Pradesh is Amaravati.
— N Chandrababu Naidu (@ncbn) April 7, 2026
#APThanksIndia#APThanksModiJi #HistoricAmaravatiResolution pic.twitter.com/W4TocOw8nQ
ಈ ಗೆಲುವು ಭೂಮಿ ನೀಡಿದ ರೈತರಿಗೆ ಮತ್ತು ಅಚಲವಾಗಿ ನಿಂತ ಜನರಿಗೆ ಸೇರಿದ್ದು. 12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆಂಧ್ರಕ್ಕೆ ತನ್ನದೇ ಆದ ರಾಜಧಾನಿ ಸಿಕ್ಕಿದೆ. ಹಳೆಯ ಅಡೆತಡೆಗಳನ್ನು ಮರೆತು ಎಲ್ಲರೂ ಒಂದಾಗಿ ಬರಬೇಕು ಎಂದು ಕರೆ ನೀಡಿರುವ ಅವರು, ಮುಂದಿನ ಪೀಳಿಗೆಗಾಗಿ ಭದ್ರ ಬುನಾದಿ ಹಾಕಿ 'ಸ್ವರ್ಣ ಆಂಧ್ರ 2047' ಎಂಬ ದೂರದೃಷ್ಟಿಯತ್ತ ರಾಜ್ಯವನ್ನು ಕೊಂಡೊಯ್ಯುವ ಸಂಕಲ್ಪ ಮಾಡಿದ್ದಾರೆ.












Click it and Unblock the Notifications