ಅಲೋಕ್ ವರ್ಮಾ ವಿರುದ್ಧ ಆರೋಪ ಹಾಸ್ಯಾಸ್ಪದ: ಸುಬ್ರಹ್ಮಣಿಯನ್ ಸ್ವಾಮಿ
ನವದೆಹಲಿ, ಅಕ್ಟೋಬರ್ 26: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಮಾಡಲಾಗುತ್ತಿರುವ ಆರೋಪ 'ಹಾಸ್ಯಾಸ್ಪದ' ಎಂದು ಬಿಜೆಪಿ ವಕ್ತಾರ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಮೇಲೆ ಶಿಸ್ತುಕ್ರಮವೆಂದು ಹೇಳಿ ಅವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿದೆ. ಆದರೆ ಇದನ್ನು ಸುಬ್ರಹ್ಮಣಿಯನ್ ಸ್ವಾಮಿ ಅವರು ಖಂಡಿಸಿದ್ದಾರೆ.
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಮೇಲೆ ಪ್ರಕರಣ ದಾಖಲಿಸಿ ಬಂದಿಸಲು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮುಂದಾಗಿದ್ದರು. ಆದರೆ ಕ್ಷಿಪ್ರ ಬೆಳವಣಿಗೆಯಲ್ಲಿ ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ಥಾನ ಅವರುಗಳನ್ನು ಕೇಂದ್ರ ಸರ್ಕಾರವು ಕಡ್ಡಾಯ ರಜೆಯ ಮೇಲೆ ಕಳಿಸಿದೆ.

ತಮ್ಮದೇ ಪಕ್ಷದ ನಿರ್ಧಾರವನ್ನು ಕಠುವಾಗಿ ಟೀಕಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಇದು ಪಕ್ಷದ ಭ್ರಷ್ಟಾಚಾರ ನಿರ್ಮೂಲನೆ ಉದ್ದೇಶಕ್ಕೆ ತಡೆ ಒಡ್ಡುತ್ತದೆ ಎಂದಿದ್ದಾರೆ. ಕೇಂದ್ರವು ಅಲೋಕ್ ವರ್ಮಾ ಮೇಲೆ ಮಾಡಿರುವ ಆರೋಪವು ಹಾಸ್ಯಾಸ್ಪದ ಎಂದು ತಮ್ಮದೇ ಪಕ್ಷದ ನಿರ್ಣಯವನ್ನು ಸ್ವಾಮಿ ಖಂಡಿಸಿದ್ದಾರೆ.
ಮೋದಿ ಅವರನ್ನು ಸಹ ಟೀಕಿಸಿರುವ ಅವರು, ಮೋದಿ ಅವರು ವಿವಿಧ ಪ್ರಮುಖರನ್ನು ಭೇಟಿ ಮಾಡಲು ಬಹು ಸಮಯ ವ್ಯಯಿಸುತ್ತಾರೆ. ಆದರೆ ಅವರ ಸುತ್ತಲಿನ ಅಧಿಕಾರಿಗಳು ಎಷ್ಟು ಪ್ರಾಮಾಣಿಕರು ಎಂದು ತಿಳಿದುಕೊಳ್ಳುವ ಪ್ರಯತ್ನ ಅವರು ಮಾಡಿದ್ದಾರೆಯೇ? ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.
ಆ ಮೂಲಕ ಮೋದಿ ಅವರ ಸುತ್ತ-ಮುತ್ತಲಿನ ಅಧಿಕಾರಿಗಳಲ್ಲಿ ಕೆಲವರು ಭ್ರಷ್ಟರು ಇದ್ದಾರೆ ಅವರು ಮೋದಿ ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications