Akhilesh Yadav: ಯೋಗಿ ಆದಿತ್ಯನಾಥ್ ನಿವಾಸದ ಕೆಳಗೆ ಶಿವಲಿಂಗವಿದೆ ಅಗೆಯಿರಿ ಎಂದ ಅಖಿಲೇಶ್ ಯಾದವ್
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಎಸ್‌ಪಿ ಪಕ್ಷಗಳ ನಡುವಿನ ಕಿತ್ತಾಟ ಮತ್ತೆ ಜೋರಾಗಿದೆ, ಹಿಂದೂ ದೇವಾಲಯಗಳ ಅಸ್ತಿತ್ವದ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರ ಹಲವು ಸ್ಥಳಗಳಲ್ಲಿ ಉತ್ಖನನ ನಡೆಸಲು ಮುಂದಾಗಿರುವ ಕ್ರಮವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯೋಗಿ ಆದಿತ್ಯನಾಥ್ ಅವರ ನಿವಾಸದ ಕೆಳಗೂ ಶಿವಲಿಂಗವಿದ್ದು ಅಲ್ಲಿಯೂ ಅಗೆಯಿರಿ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ರಾಜ್ಯದ ಹಲವು ಕಡೆಗಳಲ್ಲಿ ಅಗೆಯುತ್ತಿರುವ ಸರ್ಕಾರದ ಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದಾರೆ. "ಸಿಎಂ ನಿವಾಸದ ಕೆಳಗೆ ಶಿವಲಿಂಗವೂ ಇದೆ ಎಂದು ನನಗೆ ನೆನಪಾಗಿದೆ.. ಅದನ್ನು ಸಹ ಅಗೆಯಬೇಕು" ಎಂದು ಗೇಲಿ ಮಾಡಿದ್ದಾರೆ. ಪ್ರಾಚೀನ ಹಿಂದೂ ದೇವಸ್ಥಾನಗಳ ಹುದುಗಿಹೋಗಿವೆ ಎಂದು ಉತ್ತರ ಪ್ರದೇಶ ಸರ್ಕಾರ ಸಂಭಾಲ್ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉತ್ಖನನ ಕೆಲಸ ಮಾಡುತ್ತಿದೆ.

ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಮುನ್ನ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಅಖಿಲೇಶ್ ಯಾದವ್ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಹಲವು ಕೆಲಸಗಳು ಇನ್ನೂ ಮುಗಿದಿಲ್ಲ ಆದರೆ ಈ ಸರ್ಕಾರ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ನಿರತವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹಾ ಕುಂಭಮೇಳೆ ನಡೆಯುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಬೇಕು ಎನ್ನುವ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅಖಿಲೇಶ್ ಯಾದವ್, ತಾನು ಹಲವು ಬಾರಿ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ಕುಂಭಮೇಳಕ್ಕೆ ಭೇಟಿ ನೀಡಲು ಯಾರನ್ನೂ ಆಹ್ವಾನಿಸುವುದಿಲ್ಲ, ಜನ ತಾವಾಗಿಯೇ ಅಲ್ಲಿಗೆ ಹೋಗುತ್ತಾರೆ, ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಮುಂದೆ ನಡೆಸುವ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚುನಾವಣೆ ನಡೆಸುವುದನ್ನು ವಿರೋಧಿಸಿರುವ ಅವರು, ಜರ್ಮನಿಯಂತಹ ದೇಶಗಳಲ್ಲಿ ಕೂಡ ಮತದಾನಕ್ಕೆ ಬ್ಯಾಲೆಟ್ ಪೇಪರ್ ಗಳನ್ನು ಬಳಸುತ್ತದೆ. ಜರ್ಮನಿಯ ಸುಪ್ರೀಂ ಕೋರ್ಟ್ ಕೂಡ ಬ್ಯಾಲೆಟ್ ಪೇಪರ್ ಪರವಾಗಿ ತೀರ್ಪು ನೀಡಿದೆ ಎಂದು ಹೇಳಿದರು.












Click it and Unblock the Notifications