ಅಹ್ಮದ್ ಪಟೇಲ್ ಗೆಲುವು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಬಿಜೆಪಿ
ಗುಜರಾತ್, ಆಗಸ್ಟ್ 18: ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸಿನ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿದೆ.
ಚುನಾವಣಾ ಆಯೋಗ ಇಬ್ಬರು ಕಾಂಗ್ರೆಸ್ ಶಾಸಕರು ಮತಗಳನ್ನು ಅಸಿಂಧುಗೊಳಿಸಿದ್ದರಿಂದ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದರು.

ಚುನಾವಣಾ ಆಯೋಗದ ತೀರ್ಮಾನ ಸರಿಯಿಲ್ಲ ಎಂದು ವಾದಿಸಿರುವ ಬಿಜೆಪಿ ಆಯೋಗದ ನಿರ್ಧಾರವನ್ನು ಕೋರ್ಟ್ ನಲ್ಲಿ ಪ್ರಶ್ನಿಸಿದೆ. ಒಂದೊಮ್ಮೆ ಗುಜರಾತ್ ಹೈಕೋರ್ಟ್ ನಲ್ಲಿ ಸೋಲಾದರೆ ಸುಪ್ರಿಂ ಕೋರ್ಟ್ ಮೊರೆ ಹೋಗಲು ಬಿಜೆಪಿ ತೀರ್ಮಾನಿಸಿದೆ.
ಆಗಸ್ಟ್ 8ರಂದು ಗುಜರಾತ್ ರಾಜ್ಯಸಭೆಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿಯಿಂದ ಸ್ಮೃತಿ ಇರಾನಿ, ಅಮಿತ್ ಶಾ, ಬಲ್ವಂತ್ ಸಿನ್ಹಾ ರಜಪೂತ್ ಹಾಗೂ ಕಾಂಗ್ರೆಸ್ ನಿಂದ ಅಹ್ಮದ್ ಪಟೇಲ್ ಸ್ಪರ್ಧಿಸಿದ್ದರು.
ಶಾ ಮತ್ತು ಇರಾನಿ ತಲಾ 46 ಮತಗಳನ್ನು ಪಡೆದು ಮೇಲ್ಮನೆಗೆ ಆಯ್ಕೆಯಾಗಿದ್ದರು. ಇನ್ನು ಪಟೇಲ್ 44 ಮತಗಳನ್ನು ಪಡೆದು ಕೊನೆಗೂ ರಾಜ್ಯಸಭೆ ಪ್ರವೇಶಿಸಿದ್ದರು. ಬಲ್ವಂತ್ ಸಿನ್ಹಾ ರಜಪೂತ್ 38 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದರು.
ಒಟ್ಟು 8 ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಮತಗಳನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿತ್ತು. ಹೀಗಾಗಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದರು.












Click it and Unblock the Notifications