ಹರಿಯಾಣ ಸೋಲು; ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ಮಿತ್ರಪಕ್ಷ ತಲೆನೋವು, ಬಿಜೆಪಿಗೆ ಲಡ್ಡು!
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಸಂಕಷ್ಟ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿ ಕೂಟದ ಪಕ್ಷಗಳು ಹಾಗೂ ಬಿಜೆಪಿ ಹಾಗೂ ಬಿಜೆಪಿ ಮೈತ್ರಿಕೂಟದ ಪಕ್ಷಗಳಿಗೆ ನಿರ್ಣಾಯಕವಾಗಿದೆ. ಆದರೆ, ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಹಾವಿಕಾಸ ಅಘಾಡಿ (ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ)ದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.
ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಫಲಿತಾಂಶ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಫಲಿತಾಂಶ ಪ್ರಕಟವಾದ ಒಂದೇ ದಿನದಲ್ಲಿ ಇದರ ಪ್ರಾರಂಭವಾಗಿದೆ. ಮಹಾರಾಷ್ಟ್ರದ ಹಲವು ಪ್ರಮುಖ ನಾಯಕರು ಹರಿಯಾಣದಲ್ಲಿ ಕಾಂಗ್ರೆಸ್ ಮಾಡಿದ ತಪ್ಪಿನ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೇ ಹರಿಯಾಣದಲ್ಲಿ ಕಾಂಗ್ರೆಸ್ ಸೋಲುವುದಕ್ಕೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇ ಕಾರಣ. ಇಂಡಿಯಾ ಮೈತ್ರಿ ಕೂಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್‌ಗೆ ಈ ರೀತಿ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಇಚ್ಛೆ ಇದ್ದರೆ, ಮೊದಲೇ ಹೇಳಿ ಬಿಡಲಿ ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ ಎಂದು ಶಿವಸೇನಾ (ಉದ್ಧವ ಠಾಕ್ರೆ ಬಣ) ನಾಯಕರು ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಮೈತ್ರಿ ಪಕ್ಷಗಳನ್ನು ನಿರ್ಲಕ್ಷ್ಯ ಮಾಡುವುದಕ್ಕಿಂತ ಒಂದಾಗಿ ಹೋಗುವುದಕ್ಕೆ ಇಷ್ಟವಿಲ್ಲದಿದ್ದರೆ ಮೊದಲೇ ಹೇಳಿ ಬಿಡಲಿ. ನಾವು (ಸ್ಥಳೀಯ ಹಾಗೂ ಸಣ್ಣ ಪಕ್ಷಗಳು) ನಮ್ಮ ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮ ಕಾರ್ಯತಂತ್ರವನ್ನು ನಾವು ರೂಪಿಸಿಕೊಳ್ಳುತ್ತೇವೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಪ್ರಮುಖ ನಾಯಕ ಸಂಜಯ್ ರಾವುತ್ ಅವರು ಬಹಿರಂಗವಾಗಿಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳ ನಡುವೆ ಬಿರುಕು ಮೂಡಿದೆ.
ಶಿವಸೇನಾ (ಯುಬಿಟಿ)ದ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ರಾವತ್ ಅವರು ಬರೆದಿರುವ ಸಾಲುಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಸೋತಿದೆ. ಮಿತ್ರ ಪಕ್ಷಗಳ ಸಹಕಾರವೇ ಇಲ್ಲದೆ ಹರಿಯಾಣದಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ಭಾವಿಸಿತ್ತು. ಗೆಲ್ಲುವ ಪಂದ್ಯವನ್ನು ಕಾಂಗ್ರೆಸ್ ಕೈಚೆಲ್ಲಿದೆ. ಹರಿಯಾಣದ ಸ್ಥಳೀಯ ಕಾಂಗ್ರೆಸ್ ನಾಯಕರ ಅತಿಯಾದ ಆತ್ಮಿವಿಶ್ವಾಸ ಹಾಗೂ ಅಂಹಕಾರದಿಂದ ಸೋಲಾಗಿದೆ ಎಂದಿದ್ದಾರೆ.
ಹರಿಯಾಣದಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಏಕಮುಖ ನಿರ್ಧಾರದ ಬಗ್ಗೆ ಅವರು ತಮ್ಮ ಅಸಮಾಧಾವನ್ನು ದಾಖಲಿಸಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಗೆಲ್ಲುವ ಅವಕಾಶ ಇತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕ ತಂತ್ರದ ಬೆನ್ನಲ್ಲೇ: ಈಚೆಗೆ ಮಹಾರಾಷ್ಟ್ರದ ಕಾಂಗ್ರೆಸ್‌ನ ಪ್ರಮುಖ ನಾಯಕರು ಹೊಸ ತಂತ್ರ ಅನುಸರಿಸಿದ್ದರು. ಲೋಕಸಭೆ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಸೀಟು ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದ್ದರು. ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿತ್ತು. ಆದರೆ, ಶಿವಸೇನಾಗೆ (ಉದ್ಧವ್ ಬಣ) ನಿರೀಕ್ಷಿತ ಸೀಟುಗಳು ಸಿಕ್ಕಿರಲಿಲ್ಲ. ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಶಿವಸೇನಾಗೆ ಹೆಚ್ಚು ಸೀಟುಗಳನ್ನು (ಮಹಾರಾಷ್ಟ್ರ ವಿಧಾನಸಭೆ ಚುನಾವಣೆ) ನೀಡಬಾರದು ಎಂದು ಒತ್ತಾಯಿಸಿದ್ದರು. ಇದು ಶಿವಸೇನಾ ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಹರಿಯಾಣದಲ್ಲಿ ಗೆದ್ದ ಹುಮ್ಮಸ್ಸಿನಲ್ಲಿ ಇರುವ ಬಿಜೆಪಿಗೆ ಇದೀಗ ಮಹಾರಾಷ್ಟ್ರದಲ್ಲೂ ಒಳ್ಳೆಯ ಅಖಾಡ ಸೃಷ್ಟಿಯಾಗಿದೆ. ಮಿತ್ರಪಕ್ಷಗಳು ಭಿನ್ನಾಭಿಪ್ರಾಯವನ್ನೇ ಬಿಜೆಪಿ ಅಸ್ತ್ರವನ್ನಾಗಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications