ಜಪಾನ್ ಮಾವು ನಿರಾಕರಿಸಿದ ನಂತರ 365 ಉತ್ಪನ್ನ ಬೇಡವೆಂದ ಯುರೋಪ್, ಹೀಗಾದ್ರೆ ಭಾರತದ ರೈತರು ಸಂಕಷ್ಟದಲ್ಲಿ ಸಿಲುಕೋದು ಗ್ಯಾರಂಟಿ
ಜಪಾನ್ ಇತ್ತೀಚೆಗಷ್ಟೇ ಭಾರತದ ಮಾವು ನಮಗೆ ಬೇಡ ಎನ್ನುವ ಮೂಲಕ ಶಾಕ್ ನೀಡಿತ್ತು. ಇದೀಗ ಭಾರತದ 'ರಫ್ತು ಗುಣಮಟ್ಟದ' ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೀಟನಾಶಕಗಳು ಮತ್ತು ಅಪಾಯಕಾರಿ ಭಾರ ಲೋಹಗಳು ಪತ್ತೆಯಾಗಿದ್ದು, ಯುರೋಪ್‌ನ 27 ಸದಸ್ಯ ರಾಷ್ಟ್ರಗಳು ಸುಮಾರು 365ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳನ್ನು ತಿರಸ್ಕರಿಸಿವೆ. ಇದರ ಬೆನ್ನಲ್ಲೇ ಯುರೋಪಿಯನ್ ಒಕ್ಕೂಟದ ದೇಶಗಳಿಗೆ ರಫ್ತಾಗುವ ಆಹಾರ ಉತ್ಪನ್ನಗಳ ಗುಣಮಟ್ಟದ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ.
ದೇಶೀಯ ಮಟ್ಟದಲ್ಲಿ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಕಾರಣ ಎಂದು ಇತ್ತೀಚಿನ ದತ್ತಾಂಶಗಳು ಬಹಿರಂಗಪಡಿಸಿವೆ. ಯುರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರ ಮತ್ತು ಇಯು ಕಮಿಷನ್ ನೀಡಿರುವ ಅಂಕಿ-ಅಂಶಗಳ ಪ್ರಕಾರ, 2024ರಿಂದ 2026ರ ನಡುವೆ ಭಾರತದ ಒಟ್ಟು 450 ಕ್ಕೂ ಹೆಚ್ಚು ಉತ್ಪನ್ನಗಳನ್ನು ಯುರೋಪ್ ಗಡಿಯಲ್ಲಿ ತಡೆಯಲಾಗಿದೆ ಅಥವಾ ತಿರಸ್ಕರಿಸಲಾಗಿದೆ.

ಅಪಾಯಕಾರಿ ರಾಸಾಯನಿಕಗಳು ಯಾವುವು?
365 ಉತ್ಪನ್ನಗಳಲ್ಲಿ ನಿಷೇಧಿತ ಕೀಟನಾಶಕಗಳು ಮತ್ತು ಹಾನಿಕಾರಕ ಲೋಹಗಳು ಕಂಡುಬಂದಿವೆ. ಸುಮಾರು 50 ಉತ್ಪನ್ನಗಳಲ್ಲಿ ಸಾಲ್ಮೊನೆಲ್ಲಾ (Salmonella), ಆಫ್ಲಾಟಾಕ್ಸಿನ್ B1 (Aflatoxin B1) ನಂತಹ ಅಪಾಯಕಾರಿ ರೋಗಕಾರಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇನ್ನುಳಿದ ಕೆಲವು ಉತ್ಪನ್ನಗಳು ಖನಿಜ ತೈಲ (Mineral Oil) ಸೇರಿದಂತೆ ಇನ್ನಿತರ ಆವರಣ ಮಾಲಿನ್ಯದಿಂದಾಗಿ ತಿರಸ್ಕೃತಗೊಂಡಿವೆ.
ಯಾವೆಲ್ಲ ಉತ್ಪನ್ನ ನಿಷೇಧ
ತಿರಸ್ಕೃತಗೊಂಡ ಉತ್ಪನ್ನಗಳಲ್ಲಿ ಮೂಲಿಕೆಗಳು, ಮಸಾಲೆ ಪದಾರ್ಥಗಳು, ಹಣ್ಣು-ತರಕಾರಿಗಳು, ಒಣಗಿದ ಹಣ್ಣುಗಳು, ಧಾನ್ಯಗಳು, ಬೇಕರಿ ತಿಂಡಿಗಳು ಮತ್ತು ಪೌಷ್ಟಿಕಾಂಶದ ಆಹಾರಗಳು ಪ್ರಮುಖವಾಗಿವೆ. ಇವುಗಳಲ್ಲಿ ಮಾನವನ ನರಮಂಡಲಕ್ಕೆ ಹಾನಿ ಮಾಡುವ ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಕ್ಲೋರ್‌ಪೈರಿಫೊಸ್ ಕೀಟನಾಶಕವನ್ನು ಜಗತ್ತಿನ 44 ದೇಶಗಳು ನಿಷೇಧಿಸಿವೆ. ಆದರೆ, ಭಾರತದ ಸುಮಾರು 135 ಉತ್ಪನ್ನಗಳಲ್ಲಿ ಇದು ಪತ್ತೆಯಾಗಿದೆ.
ರಕ್ತದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ಗೆ ಕಾರಣವಾಗುವ ಎಥಿಲೀನ್ ಆಕ್ಸೈಡ್ ರಾಸಾಯನಿಕವು ಭಾರತದಲ್ಲಿ ನೋಂದಣಿಯೇ ಆಗಿಲ್ಲದಿದ್ದರೂ, 40 ಉತ್ಪನ್ನಗಳಲ್ಲಿ ಕಂಡುಬಂದಿದೆ. ಸ್ಪೇನ್ ದೇಶವು ಭಾರತದ "ಆರ್ಗಾನಿಕ್ ಅಶ್ವಗಂಧ ಬೇರು"ಗಳನ್ನು ಇದೇ ಕಾರಣಕ್ಕೆ ತಿರಸ್ಕರಿಸಿದೆ. 9 ಉತ್ಪನ್ನಗಳಲ್ಲಿ ಕ್ಯಾಡ್ಮಿಯಮ್, 7ರಲ್ಲಿ ಸೀಸ ಮತ್ತು 5 ಉತ್ಪನ್ನಗಳಲ್ಲಿ ಪಾದರಸ ಪತ್ತೆಯಾಗಿದೆ. ಯುರೋಪ್‌ನಲ್ಲಿ ನಿಷೇಧಿತವಾಗಿರುವ 'ಟ್ರೈಸೈಕ್ಲಾಜೋಲ್' ಎಂಬ ರಾಸಾಯನಿಕದ ಅತಿಯಾದ ಬಳಕೆಯಿಂದಾಗಿ ಭಾರತದ 53 ಅಕ್ಕಿ ರಫ್ತು ಆರ್ಡರ್‌ಗಳು ಕೂಡ ರದ್ದಾಗಿವೆ.
ಈ ಗಂಭೀರ ವಿಷಯದ ಕುರಿತು ಭಾರತೀಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರವು ಈ ಮಾಲಿನ್ಯ ಎಲ್ಲಿ ನಡೆಯುತ್ತಿದೆ ಎಂಬುದರ ತನಿಖೆ ನಡೆಸುತ್ತಿಲ್ಲ. ಸಮಸ್ಯೆ ಬಂದಾಗಲೆಲ್ಲಾ ರೈತರ ಮೇಲೆ ಗೂಬೆ ಕೂರಿಸಲಾಗುತ್ತದೆ. ಆದರೆ, ಎಥಿಲೀನ್ ಆಕ್ಸೈಡ್‌ನಂತಹ ರಾಸಾಯನಿಕಗಳನ್ನು ರೈತರು ಬಳಸುವುದಿಲ್ಲ. ಬದಲಿಗೆ ದೊಡ್ಡ ದೊಡ್ಡ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ನಮ್ಮಲ್ಲಿ ಉತ್ಪನ್ನದ ಪ್ರತಿಯೊಂದು ಹಂತದಲ್ಲೂ ತಪಾಸಣೆ ನಡೆಸುವ ಕಟ್ಟುನಿಟ್ಟಾದ ವ್ಯವಸ್ಥೆ ಇಲ್ಲ" ಎಂದು ಆಹಾರ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಸ್ಟಿಸೈಡ್ ಆಕ್ಷನ್ ನೆಟ್‌ವರ್ಕ್-ಇಂಡಿಯಾದ ಡಿ.ದಿಲೀಪ್ ಕುಮಾರ್ ಪ್ರಕಾರ, 2020ರಲ್ಲಿ ಕೇಂದ್ರ ಸರ್ಕಾರವು ಕ್ಲೋರ್‌ಪೈರಿಫೊಸ್ ಸೇರಿದಂತೆ 27 ತೀವ್ರ ವಿಷಕಾರಿ ಕೀಟನಾಶಕಗಳನ್ನು ನಿಷೇಧಿಸಲು ಕರಡು ಪ್ರಕಟಣೆ ಹೊರಡಿಸಿತ್ತು. ಆದರೆ ನಂತರ ಉದ್ಯಮದ ಒತ್ತಡಕ್ಕೆ ಮಣಿದು ಯು-ಟರ್ನ್ ತೆಗೆದುಕೊಂಡಿತು. ಸರ್ಕಾರದ ಈ ನಿರ್ಧಾರದಿಂದಾಗಿ ಇಂದು ರೈತರು ಮತ್ತು ರಫ್ತುದಾರರು ನಷ್ಟ ಅನುಭವಿಸುವಂತಾಗಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಸೆಪ್ಟೆಂಬರ್ 2020ರಿಂದ ಏಪ್ರಿಲ್ 2024ರ ನಡುವೆಯೂ ಇಯು ಬರೋಬ್ಬರಿ 527 ಭಾರತೀಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕಿತ್ತು. ಆಗ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಗುಣಮಟ್ಟ ಪರಿಶೀಲನೆಯ ಭರವಸೆ ನೀಡಿತ್ತಾದರೂ, ಜೂನ್ 2026ರ ಪ್ರಸ್ತುತ ವರದಿಯ ಪ್ರಕಾರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.













Click it and Unblock the Notifications