ಮೋದಿ ಪ್ರಧಾನಿ ಅಭ್ಯರ್ಥಿಯಾದರೆ ಅಡ್ವಾಣಿ ಗುಡ್ ಬೈ?
ನವದೆಹಲಿ, ಸೆ. 13 : ತಮ್ಮ ಅಣತಿಯನ್ನು ಧಿಕ್ಕರಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಭಾರತೀಯ ಜನತಾ ಪಕ್ಷದ ಅಧಿಕೃತ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇ ಆದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರು ಬಿಜೆಪಿಗೇ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ ಎಂದು ಖಚಿತವಾದ ಮೂಲಗಳಿಂದ ತಿಳಿದುಬಂದಿದೆ.
ತಾವು ವಿಧಿಸಿದ್ದ ಎಲ್ಲ ಷರತ್ತುಗಳನ್ನು ಮೀರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವುದಕ್ಕೆ ಎಲ್ಲ ರೀತಿಯ ಕಸರತ್ತುಗಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಮಾಡುತ್ತಿರುವ ಬೆನ್ನಲ್ಲಿ ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಈ ಅಂತಿಮ ನಿರ್ಣಯಕ್ಕೆ ಬಂದಿದ್ದಾರೆ.

ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಅಡ್ವಾಣಿ ಸೇರಿದಂತೆ ಕೆಲ ಹಿರಿಯ ನಾಯಕರು ಅಡ್ಡಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿಯ ಸಂಸದೀಯ ಮಂಡಳಿ ಸಭೆ ನಡೆಸುವ ಮೊದಲೇ ಎನ್‌ಡಿಎದ ಅಂಗಪಕ್ಷಗಳಾದ ಅಕಾಲಿದಳ, ಶಿವಸೇನೆ ಮುಂತಾದ ಪಕ್ಷಗಳೊಂದಿಗೆ ಮಾತುಕತೆ ನಡೆಸಿರುವ ರಾಜನಾಥ್ ಸಿಂಗ್, ಮೋದಿ ಹೆಸರನ್ನು ಅಖೈರುಗೊಳಿಸಿದ್ದಾರೆ. ಕುರಿತು ಶಿವಸೇನೆಯ ನಾಯಕ ಉಧವ್ ಠಾಕ್ರೆಗೆ ಮೋದಿ ಹೆಸರನ್ನು ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಹಿಂದೆ ಕೂಡ ಮೋದಿ ಅವರ ಹೆಸರು ಪ್ರಧಾನಿ ಹುದ್ದೆಗೆ ಪ್ರಸ್ತಾವನೆಯಾದಾಗ ಅಡ್ವಾಣಿ ಸಂಸದೀಯ ಮಂಡಳಿಗೆ ರಾಜೀನಾಮೆ ನೀಡಿದ್ದರು. ಈ ಬಾರಿ ಮೋದಿ ಹೆಸರು ಘೋಷಣೆಯಾದರೆ ಬಿಜೆಪಿ ಸಂಸದೀಯ ಮಂಡಳಿಯಿಂದ ಮಾತ್ರವಲ್ಲ ಬಿಜೆಪಿಯಿಂದಲೇ ದೂರಹೋಗುವುದಾಗಿ ಪಕ್ಷದ ನಾಯಕರಿಗೆ ಅಡ್ವಾಣಿ ಬೆದರಿಕೆ ಒಡ್ಡಿದ್ದಾರೆ. ಆದರೆ, ಕಳೆದ ಬಾರಿ ಅವರು ಸಂಸದೀಯ ಮಂಡಳಿಗೆ ರಾಜೀನಾಮೆ ನೀಡಿದಾಗ ಆರ್‌ಎಸ್ಎಸ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.
ಒಂದು ವೇಳೆ ಮೋದಿಯೇ ಪ್ರಧಾನಿ ಅಭ್ಯರ್ಥಿಯಾಗುವುದಾದರೆ ತಮ್ಮ ಕೆಲ ಷರತ್ತುಗಳನ್ನು ಒಪ್ಪಿಕೊಳ್ಳಬೇಕೆಂಬ ಬೇಡಿಕೆಯನ್ನು ಅಡ್ವಾಣಿ ಮುಂದಿಟ್ಟಿದ್ದರು. ಅವೇನೆಂದರೆ, ಮೋದಿ ಗುಜುರಾತ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು, ಉಪ ಮುಖ್ಯಮಂತ್ರಿಯನ್ನು ನೇಮಿಸಬೇಕು, ಚುನಾವಣಾ ಪ್ರಚಾರ ಸಮಿತಿಗೆ ರಾಜೀನಾಮೆ ಸಲ್ಲಿಸಬೇಕು, ಮೋದಿ ಪರ ಮತ್ತು ತಮ್ಮ ವಿರುದ್ಧದ ಪ್ರಚಾರವನ್ನು ನಿಲ್ಲಿಸಬೇಕು ಇತ್ಯಾದಿ ಇತ್ಯಾದಿ.
ಆದರೆ, ನರೇಂದ್ರ ಮೋದಿ ಅವರು ಈ ಎಲ್ಲ ಷರತ್ತುಗಳನ್ನು ತಿರಸ್ಕರಿಸಿದ್ದರು. ಮತ್ತು ಅಡ್ವಾಣಿಯವರನ್ನು ಖುದ್ದಾಗಿ ಭೇಟಿ ಮಾಡಿ ಅವರ ಮನವೊಲಿಸುವುದಾಗಿ ಹೇಳಿದ್ದರು. ಅಡ್ವಾಣಿಯವರನ್ನು ಬೆಂಬಲಿಸುತ್ತಿದ್ದ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಮತ್ತು ಅನಂತ್ ಕುಮಾರ್ ಅವರು ಈ ಮೊದಲು ಅಡ್ವಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಕೊನೆಗೂ ರಾಜನಾಥ್ ಸಿಂಗ್ ಕೈಮೇಲಾದಂತೆ ಕಂಡುಬರುತ್ತಿದೆ.











Click it and Unblock the Notifications