ನಟಿ ತುನೀಶಾ ಶರ್ಮಾ ಸಾವು: ಮಾಜಿ ಗೆಳೆಯ ಶೀಜನ್ ಖಾನ್ ನ್ಯಾಯಾಂಗ ಬಂಧನ ವಿಸ್ತರಣೆ
ನವದೆಹಲಿ, ಡಿ. 28: ಸಹನಟಿ ಹಾಗೂ ಮಾಜಿ ಗೆಳತಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ಶೀಜನ್ ಖಾನ್ ನ್ಯಾಯಾಂಗ ಬಂಧನವನ್ನು ಶುಕ್ತವಾರದವರೆಗೆ (ಡಿಸೆಂಬರ್ 30) ವಿಸ್ತರಿಸಲಾಗಿದೆ.
ತನಿಖೆಯ ಭಾಗವಾಗಿ ನಟ ಶೀಜನ್ ಖಾನ್ ಶುಕ್ರವಾರದವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಬೇಕು ಎಂದು ಮುಂಬೈನ ನ್ಯಾಯಾಲಯ ಬುಧವಾರ ತಿಳಿಸಿದೆ.
ಹಿಂದಿ ಕಿರುತೆರೆ ಮತ್ತು ಸಿನಿಮಾ ನಟಿ 21 ವರ್ಷದ ತುನೀಶಾ ಶರ್ಮಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಟಿವಿ ಕಾರ್ಯಕ್ರಮವೊಂದರ ಸೆಟ್‌ನಲ್ಲಿ ಶನಿವಾರ (ಡಿಸೆಂಬರ್ 24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಭಾನುವಾರ ಬಂಧಿಸಲಾಗಿದೆ.

ಶೀಜಾನ್ ಖಾನ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಶೀಜಾನ್ ಖಾನ್ ಮತ್ತು ತುನೀಶಾ ಆತ್ಮಹತ್ಯೆ ಮಾಡಿಕೊಳ್ಳುವ 15 ದಿನಗಳ ಮೊದಲು ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
ತುನೀಶಾ ಶರ್ಮಾ ಅವರು ಸಾವಿಗೆ ಒಂದು ವಾರದ ಮೊದಲು ಪ್ಯಾನಿಕ್ ಆಟ್ಯಾಕ್ (panic attack) ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸರಿಯಿಲ್ಲ ಎಂದು ವೈದ್ಯರು ಎಚ್ಚರಿಸಿದ್ದರು ಎಂದು ಅವರ ತಾಯಿ ವನಿತಾ ಪೊಲೀಸರಿಗೆ ತಿಳಿಸಿದ್ದಾರೆ.

ತುನೀಶಾ ಶರ್ಮಾ ಜೂನ್‌ನಿಂದ ಟಿವಿ ಧಾರವಾಹಿ ಅಲಿಬಾಬಾ ದಸ್ತಾನ್ ಇ ಕಾಬೂಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು.
ತನಗೂ ಶೀಜಾನಿಗೂ ಸಂಬಂಧವಿದ್ದು, ಆತನ ಮನೆಯವರು ತನ್ನನ್ನು ತುಂಬಾ ಇಷ್ಟಪಡುತ್ತಿದ್ದಾರೆ ಎಂದು ತುನೀಶಾ ನನಗೆ ಹೇಳಿದ್ದಳು. ಆದರೆ ಇತ್ತೀಚೆಗಷ್ಟೇ ಆಕೆ ಕೆಲಸ ಮುಗಿಸಿಕೊಂಡು ಬಂದು ಅಳಲು ತೋಡಿಕೊಂಡಿದ್ದರು. ಶೀಜಾನ್ ತನ್ನ ಜೊತೆ ಸಂಬಂಧ ಮುರಿದುಕೊಂಡಿರುವ ವಿಷಯವನ್ನು ತಿಳಿಸಿದ್ದರು ಎಂದು ನಟಿಯ ತಾಯಿ ತಿಳಿಸಿದ್ದಾರೆ.
ಡಿಸೆಂಬರ್ 16 ರಂದು, ಸಾಯುವ ಒಂದು ವಾರದ ಮೊದಲು, ತುನೀಶಾಗೆ ಪ್ಯಾನಿಕ್ ಅಟ್ಯಾಕ್ ಆಗಿತ್ತು. ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸರಿಯಿಲ್ಲ ಎಂದು ಅಲ್ಲಿನ ವೈದ್ಯರು ಆಕೆಯ ತಾಯಿಗೆ ತಿಳಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.












Click it and Unblock the Notifications