'ತನಾತನಿ ಸಂಸತ್ತು' ಎಂದು ಟ್ವೀಟ್ ಮಾಡಿ ನಟ ಪ್ರಕಾಶ್ ರಾಜ್ ವ್ಯಂಗ್ಯ
ಬೆಂಗಳೂರು, ಸೆಪ್ಟಂಬರ್ 04: ಭಾರತೀಯ ಸನಾತನ ಧರ್ಮ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ, ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಭಾರೀ ವಿವಾದ ಸೃಷ್ಟಿಸುತ್ತಿದೆ. ಈ ಸನಾತನ ಧರ್ಮ ಅಪಪ್ರಚಾರ ಹೇಳಿಕೆಯನ್ನು ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಸಂಘಟನೆಗಳು ತೀಕ್ಷಣವಾಗಿ ಖಂಡಿಸಿವೆ. ಇದೇ ವಿಚಾರವಾಗಿ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿ ಸನಾತನ ಧರ್ಮ ಕುರಿತು ವ್ಯಂಗ್ಯವಾಡಿದ್ದಾರೆ.
ಸೋಮವಾರ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ನಟ ಪ್ರಕಾಶ್ ರಾಜ್, 'ಪ್ರೀತಿಯ ಪ್ರಜೆಗಳೆ.. ಇದು ಭವಿಷ್ಯದ ಸಾಧ್ಯತೆ.. #ತನಾತನಿ ಸಂಸತ್ತು.. ನಿಮಗಿದು ಒಪ್ಪಿಗೆಯೆ #justasking'' ಎಂದು ಟ್ವೀಟ್ ಮಾಡಿದ್ದಾರೆ. 'ಸನಾತನ' ಪದ ಬಳಕೆ ಬದಲು 'ತನಾತನಿ' ಎಂದು ಪದ ಬಳಸುವ ಮೂಲಕ ಲೇವಡಿ ಮಾಡಿದ್ದಾರೆ.
ಪ್ರೀತಿಯ ಪ್ರಜೆಗಳೆ .. ಇದು ಭವಿಷ್ಯದ ಸಾಧ್ಯತೆ .. #ತನಾತನಿ ಸಂಸತ್ತು .. ನಿಮಗಿದು ಒಪ್ಪಿಗೆಯೆ #justasking pic.twitter.com/PwcOEAgqfl
— Prakash Raj (@prakashraaj) September 4, 2023
ತಮ್ಮ ಪೋಸ್ಟ್ ನಲ್ಲಿ ಇತ್ತೀಚೆಗೆ ನೂತನ ಪಾರ್ಲಿಮೆಂಟ್ ಉದ್ಘಾಟನೆ ವೇಳೆ ಪ್ರಧಾನಿ ಮೋದಿಯವರು ಪುರೋಹಿತರ ಜೊತೆಗೆ ನಿಂತಿದ್ದ ಫೋಟೊವನ್ನು ಹಾಕಿದ್ದಾರೆ. ಈ ಮೂಲಕ ಇದು ಭವಿಷ್ಯದ ಸನಾತನ ಸಂಸತ್ತು, ಭವಿಷ್ಯದಲ್ಲಿ ಸಂಸತ್ತು ಹೀಗೆ ಆಗಲಿದೆ, ಇದು ನಿಮಗೆ ಒಪ್ಪಿಗೆ ಇದೆಯೇ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.

ಪಾಕಿಸ್ತಾನಕ್ಕೂ ನಿಮ್ಮ ಜ್ಞಾನ ಕೊಡಿ: ನೆಟ್ಟಿಗರು
ಎಡಪಂಥಿಯ ವಿಚಾರಧಾರೆಗಳನ್ನು ಹೊಂದಿರುವ ನಟ ಪ್ರಕಾಶ್ ರಾಜ್ ಅವರು ಅವರ ಪೋಸ್ಟ್‌ಗೆ ಕೆಲವು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನೆಟ್ಟಿಗರಲ್ಲಿ ಒಬ್ಬರು, ''ನಿಮ್ಮಂತಹ ಮೂಲಭೂತವಾದಿ ಇಸ್ಲಾಮಿಸ್ಟ್‌ಗಳು ಮತ್ತು ಮಿಷನರಿ ಕ್ರಿಶ್ಚಿಯನ್ನರಿಂದ ತುಂಬಿದ ಸಂಸತ್ತಿಗಿಂತ ಇದು ಉತ್ತಮವಾಗಿದೆ, ಅಲ್ಲವೇ? ಎಂದು ಕಾಮೆಂಟ್ ಮಾಡುವ ಮೂಲಕ ಪುರೋಹಿತರು ಜೊತೆಗಿರುವ ಪ್ರಧಾನಿ ಮೋದಿ ಫೋಟೊಗೆ ಒಪ್ಪಿಗೆ ಸೂಚಿಸಿದ್ದಾರೆ.
ಮತ್ತೊಬ್ಬರು ಪಾಕ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 300 ರೂ.ಇದೆ. ಅಲ್ಲಿಯೂ ಸ್ವಲ್ಪ ಜ್ಞಾನವನ್ನು ಕೊಡು. ವಿದ್ಯುತ್ ಬಿಲ್, ಹಿಟ್ಟಿನ ಬೆಲೆ ಸೇರಿದಂತೆ ಅನೇಕ ಕೆಲಸಗಳಿಗೆ ಜ್ಞಾನ ಕೊಡು ಎಂದು ಕಾಮೆಂಟ್ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ. ಭಾರತವನ್ನು ಯಾರು ನಿಲ್ಲಿಸಲಾರರು, ಇಂಡಿಯಾ ಗೆಲ್ಲಲಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.

'ಸನಾತನ ಸಂಸತ್ತು' ಉತ್ತಮ
ಕಾಶ್ಮೀರಿ ಪಂಡಿತರನ್ನು ಕೊಲೆ ಮಾಡಿದ್ದ ಯಾಸಿನ್ ಮಲ್ಲಿಕ್ ಜೊತೆಗೆ ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೈ ಕುಲುಕುತ್ತ ನಿಂತಿರುವ ಫೋಟೊ ಕಾಮೆಂಟ್ ಮಾಡಿರುವ ವ್ಯಕ್ತಿ, ಈ ಸಂಸತ್ತಿಗಿಂತ 'ಸನಾತನ ಸಂಸತ್ತು' ಎಷ್ಟೋ ಉತ್ತಮ ಎಂದು ಹೇಳಿದ್ದಾರೆ. ಹೀಗೆ ಪ್ರಕಾಶ್ ರಾಜ್ ಅವರ ಪೋಸ್ಟ್‌ಗೆ ಕಾಮೆಂಟ್‌ಗಳ ಸುರಿಮಳೆ ಆಗಿದೆ. ಕೆಲವು ಪ್ರಕಾಶ್ ರಾಜ್ ಅವರ ಪರವಾಗಿಯೂ ಕಾಮೆಂಟ್ ಮಾಡಿದ್ದಾರೆ.
ತಮಿಳುನಾಡು ಸಿಎಂ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ವೇದಿಕೆ ಮೇಲೆ, ಭಾರತದ ಸನಾತನ ಧರ್ಮ ಢೆಂಗೀ, ಮಲೇರಿಯಾ ಇದ್ದಂತೆ ಅದನ್ನು ನಿರ್ಮೂಲನೆ ಗೊಳಿಸಬೇಕು ಎಂದು ವಿವಾದಾತ್ಮಕವಾಗಿ ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿಯು 'ಸಾಮಾಜಿಕ ವ್ಯವಸ್ಥೆಯ ಹೆಮ್ಮೆಯ ಪ್ರತೀಕವಾದ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಮಸ್ತ ಹಿಂದೂ ಸಮಾಜಕ್ಕೆ ಅವಮಾನಿಸುವ ಮೂಲಕ INDIA ವಿಪಕ್ಷಗಳ ಒಕ್ಕೂಟದ ಹಿಂದೂ ವಿರೋಧಿ ನಿಲುವು ಬಹಿರಂಗವಾಗಿದೆ. ಓಟ್ ಬ್ಯಾಂಕ್ ಗಾಗಿ ಹೀಗೆ ಹೇಳಿಕೆ ನೀಡಿದೆ ಎಂದು ಕಿಡಿ ಕಾರಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ಉದಯನಿಧಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿವೆ.












Click it and Unblock the Notifications