ಟೈಫಾಯ್ಡ್ ದೃಢಪಟ್ಟರೂ ಹೋರಾಟ ನಿಲ್ಲಲ್ಲ: ಕೇಂದ್ರ ಸಚಿವರ ರಾಜೀನಾಮೆಗೆ CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಪಟ್ಟು
ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ನೀಟ್ ಪರೀಕ್ಷೆ ಸಂಬಂಧಿಸಿದಂತೆ ಮುಖ್ಯವಾಗಿ ಪ್ರತಿಭಟನೆ ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಇದೀಗ ಟೈಫಾಯ್ಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ತಮ್ಮ ಆರೋಗ್ಯದಲ್ಲಿ ಏರುಪೇರಾಗಿದ್ದರೂ ಅಭಿಜಿತ್ ಈ ಬೃಹತ್ ಪ್ರತಿಭಟನೆಯನ್ನ ಹಿಂಪಡೆಯುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇದರ ಹೊಣೆಹೊತ್ತು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ತಮ್ಮ ಪ್ರಮುಖ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿರುವ ನೀಟ್ ಪರೀಕ್ಷಾ ಅಕ್ರಮವು ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದೆ. ಈ ನಿಟ್ಟಿನಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಬೀದಿಗಿಳಿದಿರುವ ಅಭಿಜಿತ್ ದೀಪ್ಕೆ, ಇದೀಗ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಆದರೆ, ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, "ನನಗೆ ಟೈಫಾಯ್ಡ್ ಇರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ. ದೇಹಕ್ಕೆ ಆಯಾಸವಾಗಿದ್ದರೂ, ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ, ವಿಶೇಷವಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೂ ಈ ಹೋರಾಟ ನಿಲ್ಲುವುದಿಲ್ಲ" ಎಂದಿದ್ದಾರೆ.
ಬೆಂಬಲಿಗರಿಗೆ ಕೃತಜ್ಞತೆ
ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಹೋರಾಟಗಾರರು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ದೀಪ್ಕೆ, ದೇಶಾದ್ಯಂತ ಅತ್ಯಂತ ಶಾಂತಿಯುತವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. "ನಿಮ್ಮ ಬೆಂಬಲವೇ ಈ ಹೋರಾಟದ ನಿಜವಾದ ಶಕ್ತಿ. ನನ್ನ ವೈಯಕ್ತಿಕ ಅನಾರೋಗ್ಯದ ಸ್ಥಿತಿಯು ಪ್ರಸ್ತುತ ನಡೆಯುತ್ತಿರುವ ಈ ಬೃಹತ್ ಚಳವಳಿಯ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ನಾವು ಒಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ" ಎಂದು ಅವರು ಕರೆ ನೀಡಿದ್ದಾರೆ.
ಸೋನಂ ವಾಂಗ್ಚುಕ್ ಉಪವಾಸ ಅಂತ್ಯ: ಸಿಜೆಪಿ ಪ್ರತಿಕ್ರಿಯೆ
ಇದೇ ವೇಳೆ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಲಡಾಖ್‌ನಲ್ಲಿ ನಡೆಸುತ್ತಿದ್ದ 26 ದಿನಗಳ ಸುದೀರ್ಘ ಉಪವಾಸ ಮುಷ್ಕರವನ್ನು ಕೊನೆಗೊಳಿಸಿರುವುದಕ್ಕೆ ಅಭೀಜಿತ್ ದೀಪ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
Have been diagnosed with typhoid, but the fight will go on until Dharmendra Pradhan resigns! pic.twitter.com/8iHSZdF6K7
— Abhijeet Dipke (@abhijeet_dipke) July 25, 2026
"ಸೋನಮ್ ವಾಂಗ್‌ಚುಕ್ ಸರ್ ಅವರು ತಮ್ಮ ಕಠಿಣ ಉಪವಾಸವನ್ನ ಹಿಂಪಡೆದಿರುವುದು ನಮಗೆಲ್ಲರಿಗೂ ತೀವ್ರ ಸಮಾಧಾನ ಹಾಗೂ ನೆಮ್ಮದಿ ತಂದಿದೆ. ಅವರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇತ್ತು. ಆದರೆ, ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಪರೀಕ್ಷಾ ಅಕ್ರಮಗಳ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವ ನಮ್ಮ ಬೇಡಿಕೆ ಇನ್ನೂ ಜೀವಂತವಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಸಿಜೆಪಿ ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ" ಎಂದು ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.


Click it and Unblock the Notifications
