Abhijeet Dipke: ಬಿಜೆಪಿ ಮಿತ್ರಪಕ್ಷದ ನಾಯಕರಿಂದ ಅಭಿಜೀತ್ ದೀಪ್ಕೆಗೆ ಆಫರ್; ಯಾವ ಪಕ್ಷ ಸೇರ್ತಾರೆ ಅಂಬೇಡ್ಕರ್‌ವಾದಿ?
Abhijeet Dipke: ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಅಭಿಜೀತ್ ದಿಪ್ಕೆ ಅವರಿಗೆ ತಮ್ಮ ಪಕ್ಷಕ್ಕೆ ಸೇರುವಂತೆ ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ನಾಯಕ ರಾಮದಾಸ್ ಅಠಾವಳೆ ಆಹ್ವಾನ ನೀಡಿದ್ದಾರೆ. ಅಭಿಜೀತ್ ದಿಪ್ಕೆ ಯುವಕರಾಗಿದ್ದು, ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಂಬೇಡ್ಕರ್ವಾದಿಯಾಗಿರುವುದರಿಂದ ತಮ್ಮ ಪಕ್ಷಕ್ಕೆ ಸೇರುವ ಬಗ್ಗೆ ಯೋಚಿಸಬೇಕು ಎಂದು ಅಠಾವಳೆ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ಸೋಮವಾರ, (ಆಗಸ್ಟ್ 17)ಮಾತನಾಡಿದ ರಾಮದಾಸ್ ಅಠಾವಳೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಲು, ಸಮಾಜವನ್ನು ಬಲಪಡಿಸಲು ಹಾಗೂ ಪಕ್ಷದ ಸಂಘಟನೆಯನ್ನು ವಿಸ್ತರಿಸಲು ಅಭಿಜೀತ್ ದಿಪ್ಕೆ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಸೇರುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಭಾಗವಾಗಿದೆ. ದಲಿತ-ಬೌದ್ಧ ಚಳವಳಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರೇರಿತವಾಗಿರುವ ಈ ಪಕ್ಷಕ್ಕೆ ರಾಮದಾಸ್ ಅಠಾವಳೆ ನಾಯಕತ್ವ ವಹಿಸಿದ್ದಾರೆ. ಅವರು ಮಹಾರಾಷ್ಟ್ರವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿದ್ದು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯ ಪಕ್ಷವಾಗುವುದಿಲ್ಲ ಎಂದಿದ್ದ CJP
ಇತ್ತೀಚೆಗೆ ಅಭಿಜೀತ್ ದಿಪ್ಕೆ ಅವರು ಕಾಕ್‌ರೋಚ್ ಜನತಾ ಪಾರ್ಟಿ ಸದ್ಯಕ್ಕೆ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬದಲಿಗೆ, ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆ ತರಲು ಒತ್ತಡ ಹೇರುವ ಒತ್ತಡ ಗುಂಪಾಗಿ (Pressure Group) ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದರು.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ CJP ಪ್ರಮುಖ ತಂಡದ ಸಭೆಗೂ ಮುನ್ನ ಮಾತನಾಡಿದ್ದ ಅವರು, ಮಾಧ್ಯಮಗಳು ಮತ್ತು ನ್ಯಾಯಾಂಗ ಸೇರಿದಂತೆ ವಿವಿಧ ಸಂಸ್ಥೆಗಳ ಮೇಲಿನ ಜನರ ವಿಶ್ವಾಸ ಕುಸಿಯುತ್ತಿರುವುದು ಚರ್ಚೆಯ ಪ್ರಮುಖ ವಿಷಯವಾಗಲಿದೆ ಎಂದಿದ್ದರು.
ದೇಶದಲ್ಲಿ ಪ್ರಸ್ತುತ ರಾಜಕೀಯ ಪಕ್ಷಕ್ಕಿಂತ ಜನರ ಪರವಾಗಿ ಧ್ವನಿ ಎತ್ತುವ ಒತ್ತಡ ಗುಂಪಿನ ಅಗತ್ಯವಿದೆ ಎಂಬುದು ತಮ್ಮ ಅಭಿಪ್ರಾಯ ಎಂದು ದಿಪ್ಕೆ ಹೇಳಿದ್ದರು. ಹೀಗಾಗಿ, ರಾಮದಾಸ್ ಅಠಾವಳೆ ಅವರ ಪಕ್ಷ ಸೇರುವ ಆಹ್ವಾನಕ್ಕೆ ಅಭಿಜೀತ್ ದಿಪ್ಕೆ ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹೋರಾಟ
ಅಭಿಜೀತ್ ದಿಪ್ಕೆ ಅವರು ಜೂನ್‌ನಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದ ಬಳಿಕ NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದೇಶದ ವಿವಿಧ ಭಾಗಗಳ ಯುವಕರನ್ನು ಒಗ್ಗೂಡಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು.
ಇದೀಗ ದಿಪ್ಕೆ ಅವರು ಸರ್ಕಾರಿ ಶಾಲೆಗಳ ಸುಧಾರಣೆಯತ್ತಲೂ ಗಮನ ಹರಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ಜನರ ಗಮನಕ್ಕೆ ತರಲು CJP ವತಿಯಿಂದ 'ಸ್ಕೂಲ್ ಠೀಕ್ ಕರೋ' ಅಭಿಯಾನ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ತಮ್ಮ ಸ್ವಗ್ರಾಮ ಸಂತುಕ್ ಪಿಂಪ್ರಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಶಾಲೆಯ ಸ್ಥಿತಿಗತಿಗಳ ಪರಿಶೀಲನೆಯನ್ನೂ ಅವರು ನಡೆಸಿದ್ದರು.
Abhijeet Dipke: ಸರ್ಕಾರಿ ಶಾಲೆಗಳ ಸುಧಾರಣೆಗೆ ದಿಪ್ಕೆ ಸಲಹೆ
ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸುವ ಕುರಿತು ಮಾತನಾಡಿರುವ ಅಭಿಜೀತ್ ದಿಪ್ಕೆ, ಶಿಕ್ಷಣ ಇಲಾಖೆಯ ಸಚಿವರು, ಅಧಿಕಾರಿಗಳು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಜವಾಬ್ದಾರಿ ಹೊಂದಿರುವವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಓದಲು ಆರಂಭಿಸಿದರೆ, ಶಾಲೆಗಳ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸಲು ಹೆಚ್ಚಿನ ಗಮನ ನೀಡಲಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಒಂದೆಡೆ ಸರ್ಕಾರಿ ಶಾಲೆಗಳ ಸುಧಾರಣೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗಳಿಗಾಗಿ ಅಭಿಜೀತ್ ದಿಪ್ಕೆ ಅಭಿಯಾನ ನಡೆಸುತ್ತಿದ್ದರೆ, ಮತ್ತೊಂದೆಡೆ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸುವ ಮೂಲಕ ರಾಮದಾಸ್ ಅಠಾವಳೆ ರಾಜಕೀಯ ಪ್ರವೇಶದ ಸಾಧ್ಯತೆಯನ್ನು ಮುಂದಿಟ್ಟಿದ್ದಾರೆ.


Click it and Unblock the Notifications
