ಅರ್ಜೆಂಟಾಗಿ ಆಧಾರ್ ಗೆ ಕಾನೂನಿನ ಮಾನ್ಯತೆ
ನವದೆಹಲಿ, ಸೆ.25: ಭಾರತದ ವಿಶಿಷ್ಟ ಗುರುತು ಪತ್ರ ಪ್ರಾಧಿಕಾರಕ್ಕೆ (ಯುಐಡಿಎಐ) ಶಾಸನಬದ್ಧ ಮಾನ್ಯತೆ ನೀಡಲು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ದೀರ್ಘ ಕಾಲದಿಂದ ಬಾಕಿಯಿರುವ ಮಸೂದೆಯೊಂದನ್ನು ಮಂಡಿಸಲು ಸರ್ಕಾರ ಆತುರದಲ್ಲಿದೆ.
ಈ ನಡುವೆ ಆಧಾರ್ ಬಗ್ಗೆ ನೀಡಿರುವ ತೀರ್ಪನ್ನು ಮರುವಿಮರ್ಶಿಸುವಂತೆ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲು ಯುಪಿಎ ಸರ್ಕಾರ ನಡೆಸಿದೆ.
ಮುಂದಿನ ಚಳಿಗಾಲದ ಅಧಿವೇಶನದಲ್ಲಿ 'ಭಾರತದ ರಾಷ್ಟ್ರೀಯ ಗುರುತುಪತ್ರ ಪ್ರಾಧಿಕಾರ ಮಸೂದೆ 2010'ನ್ನು ಚರ್ಚೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಯೋಜನಾ ಸಚಿವ ರಾಜೀವ್ ಶುಕ್ಲಾ ಹೇಳಿದ್ದಾರೆ.
ಭಾರತದ ಎಲ್ಲಾ ನಿವಾಸಿಗಳಿಗೆ 12 ಅಂಕೆಗಳ ಆಧಾರ್ ಸಂಖ್ಯೆಯನ್ನು ನೀಡುತ್ತಿರುವ ನಂದನ್ ನಿಲೇಕಣಿ ನೇತೃತ್ವದ ಯುಐಡಿಎಐ ಯೋಜನೆಗೆ ಸುಮಾರು 50000 ಕೋಟಿ ರು ಖರ್ಚು ವೆಚ್ಚವಾಗಿದೆ ಎಂಬ ಸರ್ಕಾರದ ಹೇಳಿಕೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಯುಐಡಿಎಐಯ ಕೆಲಸವು ಸುಪ್ರೀಂ ಕೋರ್ಟಿನ ಪರಿಶೀಲನೆಗೊಳಪಟ್ಟಿದ್ದು, ಆಧಾರ್ ಕಾರ್ಡನ್ನು ಕೇವಲ ಭಾರತದ ಪ್ರಜೆಗಳಿಗೆ ಮಾತ್ರ ನೀಡಬೇಕು. ಅದನ್ನು ಸರ್ಕಾರದ ಯಾವುದೇ ಸಬ್ಸಿಡಿ ಯೋಜನೆಗೆ ಕಡ್ಡಾಯ ಮಾಡಬಾರದು ಎಂದು ಸೋಮವಾರ ಸುಪ್ರೀಂ ಕೋರ್ಟ್ ತನ್ನ ತಾತ್ಕಾಲಿಕ ಆದೇಶದಲ್ಲಿ ಹೇಳಿತ್ತು.
ಪ್ರಾಧಿಕಾರಕ್ಕೆ ಕಾನೂನು ಬೆಂಬಲ ನೀಡುವ ಮಸೂದೆಗೆ ಕೇಂದ್ರ ಸಂಪುಟ 2010ರ ಸೆಪ್ಟಂಬರ್ ನಲ್ಲಿ ಅಂಗೀಕಾರ ನೀಡಿತ್ತು. ಅದನ್ನು ಮಾಜಿ ಅರ್ಥ ಸಚಿವ ಹಾಗೂ ಬಿಜೆಪಿ ನಾಯಕ ಯಶವಂತ್ ಸಿನ್ಹಾ ನೇತೃತ್ವದ ಹಣಕಾಸಿನ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಲಾಗಿತ್ತು.
ಈಗ ಸ್ಥಾಯಿ ಸಮಿತಿ ಮಸೂದೆಯನ್ನು ಯೋಜನಾ ಆಯೋಗಕ್ಕೆ ಮರಳಿ ಕಳುಹಿಸಿದೆ. ತಾವದನ್ನು ಶೀಘ್ರವೇ ಸಂಪುಟದ ಮುಂದೆ ತಂದು, ಚಳಿಗಾಲದ ಅಧಿವೇಶನದಲ್ಲಿ ಮಂಜೂರಾತಿ ಪಡೆಯಲು ಪ್ರಯತ್ನಿಸಲಿದ್ದೇವೆ ಎಂದು ಶುಕ್ಲಾ ಹೇಳಿದ್ದಾರೆ.
ಯುಐಡಿಎಐ ಆಧಾರ್ ಸಂಖ್ಯೆಯ ನೋಂದಣಿಯನ್ನು ಕಡ್ಡಾಯ ಮಾಡಿಲ್ಲ. ಫಲಾನುಭವಿಗಳನ್ನು ಹೇಗೆ ಗುರುತಿಸಬೇಕೆಂಬುದು ಕೇಂದ್ರೀಯ ಇಲಾಖೆಗಳು, ಸಚಿವರು ಹಾಗೂ ರಾಜ್ಯ ಸರಕಾರಗಳ ನಿರ್ಧಾರಕ್ಕೆ ಸೇರಿದ ವಿಷಯವಾಗಿದೆಯೆಂದು ಅವರು ಹೇಳಿದರು.
ಆಧಾರ್, ವ್ಯಕ್ತಿಯ ಗುರುತನ್ನು ಸಾಬೀತುಪಡಿಸುತ್ತದೆಯೇ ಹೊರತು ಆತನ ರಾಷ್ಟ್ರೀಯತೆಯನ್ನಲ್ಲ. ಅದು ವಾಸ್ತವ್ಯ ದಾಖಲೆ ಯಾಗಿಯೂ ಕೆಲಸ ಮಾಡುತ್ತದೆ. ಅಲ್ಲದೆ ಅದು ಐಚ್ಛಿಕ ಸೌಲಭ್ಯ ವಾಗಿದ್ದು ಕಡ್ಡಾಯವಲ್ಲ ಎಂದು ಶುಕ್ಲಾ ಸ್ಪಷ್ಟಪಡಿಸಿದರು.
ಮದುವೆ ನೋಂದಣಿಗೂ ಆಧಾರ್ ಕಡ್ಡಾಯ ಎಂಬ ವಿಷಯ ಕೇಳಿದ ಮೇಲೆ ಆಧಾರ್ ಮಾನ್ಯತೆ ಬಗ್ಗೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆಎಸ್ ಪುಟ್ಟಸ್ವಾಮಿ ಅವರು ಸುಪ್ರೀಂಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಹಾಕಿದ್ದರು.












Click it and Unblock the Notifications