ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್
ನವದೆಹಲಿ, ಅ.27 : ಆಧಾರ್ ಕಾರ್ಡ್ ಮತ್ತೆ ಸುದ್ದಿಯಲ್ಲಿದೆ. ಕೇಂದ್ರ ಸರ್ಕಾರ ಮೊಬೈಲ್ ನಂಬರ್‌ಗಳನ್ನು ಆಧಾರ್‌ಗೆ ಸಂಪರ್ಕಿಸುವ ಪ್ರಕ್ರಿಯೆಗೆ ಶೀಘ್ರಲ್ಲಿಯೇ ಚಾಲನೆ ನೀಡಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಆಸಕ್ತಿ ವಹಿಸಿದ್ದು, ದೂರಸಂಪರ್ಕ ಇಲಾಖೆಗೆ ಈ ಕುರಿತ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಆರ್.ಎಸ್.ಶರ್ಮಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಆಧಾರ್ ಕಾರ್ಡ್ ಮಾಡಿಸುವಾಗಲೇ ಜನರು ಮೊಬೈಲ್ ನಂಬರ್ ನೀಡಿರುವುದರಿಂದ ಈ ಸಂಪರ್ಕ ಕೆಲಸ ಸುಲಭವಾಗಲಿದೆ ಎಂದು ಹೇಳಿದ್ದಾರೆ. [ಬ್ಯಾಂಕ್ ಖಾತೆಗೂ ಆಧಾರ್ ಇರಲಿ]

ಆಧಾರ್‌ಗೆ ಮೊಬೈಲ್ ನಂಬರ್ ಸಂಪರ್ಕಿಸುವುದರಿಂದ ಹೊಸ ಸಿಮ್ ಕಾರ್ಡ್ ಖರೀದಿ ಸಂದರ್ಭದಲ್ಲಿ ಉಪಯೋಗವಾಗಲಿದೆ. ವಿಳಾಸ ದೃಡೀಕರಣದ ಸಂದರ್ಭದಲ್ಲಿ ಮೊಬೈಲ್ ನಂಬರ್ ಪ್ರಮುಖ ಪುರಾವೆಯಾಗಲಿದ್ದು, ಬೇಕಾಬಿಟ್ಟಿ ಸಿಮ್ ಖರೀದಿಗೆ ಕಡಿವಾಣ ಬೀಳಲಿದೆ ಎಂಬುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಆಧಾರ್‌ಗೆ ಮೊಬೈಲ್ ನಂಬರ್ ಸಂಪರ್ಕಿಸುವ ಕುರಿತು ದೂರ ಸಂಪರ್ಕ ಇಲಾಖೆ ಹಲವು ಇಲಾಖೆಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಈ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ಪ್ರಧಾನಿ ಮೋದಿ ಅವರ ಕನಸಿನ ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಪ್ರಕ್ರಿಯೆ ನಡೆಯಲಿದೆ.
ಮಾಹಿತಿ ಮತ್ತು ವ್ಯವಹಾರದಲ್ಲಿ ದೃಢೀಕರಿಸಲು ಮೊಬೈಲ್ ಒಂದು ಬಲವಾದ ಸಾಧನವಾಗಿದೆ. ಎರಡು ಸಂಖ್ಯೆಗಳನ್ನು ಜೋಡಿಸುವುದರಿಂದ ದೇಶದಲ್ಲಿ ಇ ಕಾಮರ್ಸ್ ಕ್ಷೇತ್ರದ ಬೆಳವಣಿಗೆ ಸಹಕಾರಿಯಾಗಲಿರುವುದರಿಂದ ಕೇಂದ್ರ ಸರ್ಕಾರ ಈ ಪ್ರಕ್ರಿಯೆಗೆ ಕೈ ಹಾಕಿದೆ.












Click it and Unblock the Notifications