ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇದ್ದ ವೇದಿಕೆಗೆ ಮಗುವನ್ನು ಎಸೆದ ಕಾರ್ಮಿಕ: ನೋವಿನ ಕಥೆಯಿದು
ಭೋಪಾಲ್, ಮೇ. 16: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಾಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಕಾರ್ಮಿಕರೊಬ್ಬರು ತನ್ನ ಒಂದು ವರ್ಷದ ಮಗುವನ್ನು ವೇದಿಕೆಯ ಮೇಲೆ ಎಸೆದಿರುವ ಘಟನೆ ವರದಿಯಾಗಿದೆ. ಇದು ಎಲ್ಲರ ಗಮನ ಸೆಳೆದಿದ್ದು, ನೆರೆದಿದ್ದವರಲ್ಲಿ ಭಾರಿ ಗೊಂದಲ ಉಂಟುಮಾಡಿದೆ.
ಹೌದು, ಮಗುವಿನ ಜೀವ ಉಳಿಸಲು ತಂದೆ ತನ್ನದೆ ಒಂದು ವರ್ಷದ ಮಗುವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡುತ್ತಿದ್ದ ವೇದಿಕೆ ಮೇಲೆ ಎಸೆದಿದ್ದಾರೆ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಮುಖೇಶ್ ಪಟೇಲ್ ತಮ್ಮ ಸಂಕಷ್ಟದ ಬಗ್ಗೆ ಸಿಎಂ ಗಮನ ಸೆಳೆಯಬೇಕೆಂದು ಈ ಕೆಲಸ ಮಾಡಿದ್ದಾರೆ.

ಮಧ್ಯಪ್ರದೇಶದ ಸಾಗರದಲ್ಲಿ ನಡೆಯುತ್ತಿದ್ದ ಕುಶಾವಾಹ ಮತ್ತು ಜಾಟ್ ಸಮುದಾಯಗಳ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖೇಶ್ ಪಟೇಲ್ ಅವರ ಈ ಕೆಲಸ ಸಾಕಷ್ಟು ಸಂಚಲನ ಮೂಡಿಸಿದ್ದು, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನವನ್ನೂ ಸೆಳೆದಿತ್ತು. ಜನರ ಗುಂಪಿನ ನಡುವೆ ಒಂದು ವರ್ಷದ ಮಗು ವೇದಿಕೆಯಿಂದ ಒಂದು ಅಡಿ ದೂರದಲ್ಲಿ ಬಂದು ಬಿದ್ದಿದೆ. ಕಾರ್ಯಕ್ರಮದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಮಗುವನ್ನು ತಾಯಿಗೆ ಒಪ್ಪಿಸಿದ್ದಾರೆ.
ಮುಖೇಶ್ ಪಟೇಲ್ ಬಡವರಾಗಿದ್ದು, ತನ್ನ ಮಗುವಿನ ಹೃದಯದಲ್ಲಿ ರಂಧ್ರವಿದೆ. ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಿಲ್ಲವಾದ್ದರಿಂದ ಸಹಾಯಕ್ಕಾಗಿ ಸಿಎಂ ಕಚೇರಿಗೆ, ಅಧಿಕಾರಿಗಳ ಬಳಿಗೆ ಹೋಗುತ್ತಿದ್ದರೂ ಯಾರು ಸಹಾಯ ಮಾಡುತ್ತಿಲ್ಲ ಎಂದಿದ್ದಾರೆ.. ಹೀಗಾಗಿ ಮುಕ್ಯಮಂತ್ರಿಗಳ ಗಮನ ಸೆಳೆಯಲು ಮಗುವನ್ನು ವೇದಿಕೆಗೆ ಎಸೆದಿರುವುದಾಗಿ ತಿಳಿಸಿದ್ದಾರೆ.

ಮುಖೇಶ್ ಪಟೇಲ್ ಸಾಗರದ ಕೆಸ್ಲಿ ತಾಲೂಕಿನ ಸಹಜ್‌ಪುರ ಗ್ರಾಮದ ನಿವಾಸಿ. ಅವರು ತಮ್ಮ ಪತ್ನಿ ನೇಹಾ ಮತ್ತು ಅವರ ಒಂದು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದಾರೆ. ಘಟನೆಗೆ ಸಾಕ್ಷಿಯಾದ ಮುಖ್ಯಮಂತ್ರಿ ಬಡ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಕರಣವನ್ನು ಸಿಎಂ ಕಚೇರಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿ ದೀಪಕ್ ಆರ್ಯ ಅವರಿಗೆ ಶಿವರಾಜ್ ಸಿಂಗ್ ಚೌಹಾಣ್ ಸೂಚನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖೇಶ್ ಪಟೇಲ್, ತಮ್ಮ ಮಗುವಿಗೆ 3 ತಿಂಗಳಿದ್ದಾಗ ಹೃದಯದಲ್ಲಿ ರಂಧ್ರವಿದೆ ಎಂಬುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ವೆಚ್ಚ ಭರಿಸಲು ಸಾಧ್ಯವಾಗದಿದ್ದರೂ ಮಗನ ಚಿಕಿತ್ಸೆಗಾಗಿ ಇಲ್ಲಿಯವರೆಗೆ 4 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. "ನಮ್ಮ ಮಗುವಿಗೆ ಈಗ ಒಂದು ವರ್ಷ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸುವಂತೆ ಹೇಳಿದ್ದಾರೆ. ಆದರೆ 3.50 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಹೇಳಿದ್ದು, ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಲು ನಮಗೆ ಸಾಧ್ಯವಿಲ್ಲ" ಎಂದಿದ್ದಾರೆ.
"ನಮ್ಮ ಮಗುವಿಗೆ ಚಿಕಿತ್ಸೆ ಬೇಕು. ಆದರೆ ಯಾರೂ ನಮಗೆ ಸಹಾಯ ಮಾಡುತ್ತಿಲ್ಲ. ನಮಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಹ ಅವಕಾಶ ನೀಡಲಿಲ್ಲ, ಅವರನ್ನು ತಲುಪಲು ಪೊಲೀಸರು ನಮಗೆ ಸಹಾಯ ಮಾಡಲಿಲ್ಲ. ಆದ್ದರಿಂದ ನಾನು ನನ್ನ ಮಗುವನ್ನು ವೇದಿಕೆಯ ಮೇಲೆ ಎಸೆದಿದ್ದೇನೆ. ಈಗ ಅಧಿಕಾರಿಗಳು ವಿಷಯದ ಬಗ್ಗೆ ಗಮನ ಹರಿಸಿದ್ದಾರೆ. ನಾಳೆ ಸಿಎಂ ಅವರನ್ನು ಭೇಟಿಯಾಗುವಂತೆ ನಮಗೆ ತಿಳಿಸಿದ್ದಾರೆ" ಎಂದು ಮುಖೇಶ್ ಹೇಳಿದ್ದಾರೆ.












Click it and Unblock the Notifications