ನಟಿ ಶಿಲ್ಪಾ ಶೆಟ್ಟಿ ಮೇಲೆ 420 ಕೇಸು ದಾಖಲು
ಕೋಲ್ಕತ್ತಾ, ಮಾ.23: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆ ಪತಿ ರಿಪು ಸೂದನ್ ಕುಂದ್ರಾ(ರಾಜ್ ಕುಂದ್ರಾ) ಅವರ ಮೇಲೆ ವಂಚನೆ ಆರೋಪ ಹೊರೆಸಲಾಗಿದೆ. ಕೋಲ್ಕತ್ತಾ ಪೊಲೀಸರು ಶಿಲ್ಪಾ ಶೆಟ್ಟಿ ಅವರ ಎಸೆನ್ಷಿಯಲ್ ನ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಇಎಸ್‌ಪಿಎಲ್) ಕಂಪನಿ ಮೇಲೆ 9 ಕೋಟಿ ರು ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.
ಎಸೆನ್ಷಿಯಲ್ ನ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಇಎಸ್‌ಪಿಎಲ್) ಕಂಪನಿ ನಡೆಸುತ್ತಿರುವ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರು ಎಂ.ಕೆ. ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಚೆಕ್ ಹಾಗೂ ಆರ್‌ಟಿಜಿಎಸ್ ಮೂಲಕ 9 ಕೋಟಿ ರೂ. ಹಣ ಪಡೆದಿದ್ದರು. ಈ ಹಣವನ್ನು ಎರಡು ವರ್ಷದೊಳಗೆ 10 ಪಟ್ಟು ಹೆಚ್ಚಿಗೆ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದ್ದರು.

ಇಎಸ್‌ಪಿಎಲ್ ಕಂಪನಿ ಷೇರುದಾರರಾದ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರು ಕೋಲ್ಕತ್ತಾ ಮೂಲದ ಕಂಪನಿಗೆ ನೀಡಬೇಕಿದ್ದ 30 ಲಕ್ಷ ಷೇರುಗಳು ಹಂಚಿಕೆ ಕೂಡಾ ಮಾಡಿಲ್ಲ ಎಂದು ತಿಳಿದು ಬಂದಿದೆ.
ಪ್ರಾಥಮಿಕ ತನಿಖೆಯಿಂದ ಷೇರುಗಳ ಹಂಚಿಕೆಯಲ್ಲೇ ಅವ್ಯವಹಾರ ನಡೆದಿದೆ. ಶಿಲ್ಪಾಶೆಟ್ಟಿ ಅವರ ದೊಡ್ಡ ಮೊತ್ತದ ಷೇರುಗಳನ್ನು ಹೊಂದಿಲ್ಲ. ಇನ್ನು ಹಣ ಮರಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೊಂದಿಗೆ ತನಿಖೆ ಮುಂದುವರೆಯಲಿದೆ ಎಂದು ಶೇಕ್ಸ್ ಪಿಯರ್ ಶರಣಿ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
ಎಂ.ಕೆ. ಮೀಡಿಯಾ ಕಂಪನಿಯ ಪ್ರತಿನಿಧಿ ದೇಬಶೀಸ್ ಗುಹಾ ಅವರು ನೀಡಿದ ದೂರಿನ ಮೇರೆಗೆ ಕೋಲ್ಕತ್ತಾ ಪೊಲೀಸರು ಐಪಿಸಿ ಸೆಕ್ಷನ್ 120ಬಿ, 406, 420, 388, 389, 506 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲ್ಕತ್ತಾ ಹೈಕೋರ್ಟ್ ನಲ್ಲೂ ಈ ಪ್ರಕರಣ ಸಂಬಂಧ ಮತ್ತೊಂದು ಅರ್ಜಿ ವಿಚಾರಣೆಗೆ ಬರಬೇಕಿದೆ.












Click it and Unblock the Notifications