ಮೊಮ್ಮಗಳ ಜೊತೆ ಶಾಲೆಯಲ್ಲಿ ಪಾಠ ಕೇಳುವ ಅಜ್ಜಿ: ಸ್ಪೂರ್ತಿದಾಯಕ ಕಥೆ ಇಲ್ಲಿದೆ....
ಲಕ್ನೋ ಸೆಪ್ಟೆಂಬರ್ 28: ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧನವಾಗಿದೆ. ಇದು ಮೂಲಭೂತ ಹಕ್ಕು ಕೂಡ ಹೌದು. ಹೀಗಾಗಿ ಇಂದಿನ ಕಾಲದಲ್ಲಿ ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಆದರೆ ಶಿಕ್ಷಣ ಪಡೆಯುವ ಕನಸು ನನಸಾಗಿಸಲು ಈಗಲೂ ಹಲವರಿಗೆ ಸಾಧ್ಯವಾಗುತ್ತಿಲ್ಲ.
ಅಂತಹ ವಿದ್ಯಾರ್ಥಿಗಳಲ್ಲಿ ಒಬ್ಬರು ಬುಲಂದ್‌ಶಹರ್‌ನ ಚಾವ್ಲಿ ಗ್ರಾಮದ ನಿವಾಸಿ ಸಲೀಮಾ ಖಾನ್. ಶಿಕ್ಷಣ ಪಡೆಯುವ ಹಂಬಲವಿರುವ ಈ ಮಹಿಳೆಯ ವಯಸ್ಸು ಬರೋಬ್ಬರಿಗೆ 92 ವರ್ಷ. ಈ ಇಳಿ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಿದ್ದಾರೆ.

ಕಲಿಯುವ ಉತ್ಸಾಹ, ಆಸಕ್ತಿ, ಸ್ಫೂರ್ತಿಯ ಕಿರಣ ಮತ್ತು ಹಲ್ಲಿಲ್ಲದ ಚಂದದ ನಗು ಈ ಅಜ್ಜಿ ಮುಖದಲ್ಲಿ ಇದೆ. ಅದನ್ನು ಸಲೀಮಾ ಖಾನ್ ಪ್ರತಿದಿನ ಶಾಲೆಗೆ ಕರೆತರುತ್ತಾಳೆ. ಅವಳು ತನ್ನ ಮೊಮ್ಮಗಳು ಫಿರ್ದೌಸ್ ಜೊತೆ ಶಾಲೆಗೆ ನಿತ್ಯ ಹಾಜರಾಗುತ್ತಾಳೆ. ಹಾಗಾದರೆ ಯಾರಿದು ಸಲೀಮಾ ಖಾನ್? ಈ ಸ್ಫೂರ್ತಿಯ ಮಹಿಳೆಯ ಬಗ್ಗೆ ಇನ್ನಷ್ಟು ತಿಳಿಯಿರಿ..
92 ವರ್ಷದ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ
ಸಲೀಮಾ ಖಾನ್ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಚಾವ್ಲಿ ಗ್ರಾಮದ ನಿವಾಸಿ. ಅವರಿಗೀಗ 92 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಓದಲು ಮತ್ತು ಬರೆಯಲು ಕಲಿಯುವ ಆಸೆಯಿಂದ ಶಾಲೆಗೆ ಹೋಗುತ್ತಾರೆ. ಇದರಿಂದಾಗಿ ಅವರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
ಸಲೀಮಾ ಖಾನ್ ಈಗ ಆರು ತಿಂಗಳ ಕಾಲ ಪ್ರಾಥಮಿಕ ಶಾಲೆಗೆ ಹೋಗಿ ಓದಲು ಮತ್ತು ಬರೆಯಲು ಕಲಿತಿದ್ದಾರೆ. ಕುಟುಂಬ ಸದಸ್ಯರು ಕೂಡ ಆಕೆಯ ಕಲಿಕೆಗೆ ಸಹಾಯ ನೀಡುತ್ತಿದ್ದಾರೆ. ಈ ವಯಸ್ಸಿನಲ್ಲಿ ತಾನು ಶಿಕ್ಷಣ ಪಡೆಯುತ್ತಿದ್ದೇನೆ ಎಂದು ಹೆಮ್ಮೆಪಡುವ ಅವರು ತಮ್ಮ ಹೆಸರಿನಲ್ಲಿ ತಮಗೆ ಸಹಿ ಹಾಕಲು ಬರುತ್ತದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಅವರು ಓದುತ್ತಿರುವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡಾ. ಪ್ರತಿಭಾ ಶರ್ಮಾ ಅವರು ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿ, 'ಸಲೀಮಾ ಎಂಟು ತಿಂಗಳ ಹಿಂದೆ ನಮ್ಮ ಬಳಿಗೆ ಬಂದು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿದರು. ಅಂತಹ ವಯಸ್ಸಾದ ಮಹಿಳೆಗೆ ಶಿಕ್ಷಣ ನೀಡುವುದು ಕಷ್ಟ, ಆದ್ದರಿಂದ ನಾವು ಆರಂಭದಲ್ಲಿ ಸ್ವಲ್ಪ ಹಿಂಜರಿಯುತ್ತಿದ್ದೆವು. ಆದಾಗ್ಯೂ ಆಕೆಯ ಜೀವನದ ಶರತ್ಕಾಲದಲ್ಲಿ ಅಧ್ಯಯನ ಮಾಡುವ ಉತ್ಸಾಹವು ನಮ್ಮ ಮನಸ್ಸನ್ನು ಬದಲಾಯಿಸುವಂತೆ ಮಾಡಿತು. ಅವಳನ್ನು ನಿರಾಕರಿಸುವ ಮನಸ್ಸು ನಮಗಾಗಲಿಲ್ಲ. ಅವರ ವಯಸ್ಸು ಹಳೆಯದಾದರೂ ಅವರು ಹೊಸ ವಿದ್ಯಾರ್ಥಿನಿ' ಎಂದಿದ್ದಾರೆ.
ಸಲೀಮಾ 1 ರಿಂದ 100 ರವರೆಗೆ ಸಂಖ್ಯೆಗಳನ್ನು ಎಣಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಸ್ಫೂರ್ತಿಯ ಮಹಿಳೆ ಸಲೀಮಾ ಖಾನ್
ಸಲೀಮಾ ಖಾನ್ ಅವರ ಸುತ್ತಲಿನ ಬಹಳಷ್ಟು ಮಹಿಳೆಯರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಸಲೀಮಾ ಖಾನ್ ಅವರ ಶಾಲೆಯ ಮುಖ್ಯೋಪಾಧ್ಯಾಯಿನಿ ಡಾ.ಪ್ರತಿಭಾ ಶರ್ಮಾ ಮಾತನಾಡಿ, 'ಸಲೀಮಾ ಅವರ ಉತ್ಸಾಹ ಕಂಡು ಗ್ರಾಮದ 25 ಮಹಿಳೆಯರು, ಅವರ ಇಬ್ಬರು ಸೊಸೆಯಂದಿರು ತರಗತಿಗೆ ಸೇರಲು ಮುಂದೆ ಬಂದರು. ಈಗ, ನಾವು ಅವರಿಗಾಗಿ ಪ್ರತ್ಯೇಕ ಸೆಷನ್‌ಗಳನ್ನು ಪ್ರಾರಂಭಿಸಿದ್ದೇವೆ. ಸಲೀಮಾ ಖಾನ್ 14 ನೇ ವಯಸ್ಸಿನಲ್ಲಿ ವಿವಾಹವಾದರು. ಆಗ ಅವರ ಗ್ರಾಮದಲ್ಲಿ ಯಾವುದೇ ಶಾಲೆಗಳು ಇರಲಿಲ್ಲ. ಶೀಘ್ರದಲ್ಲೇ ಅವರು ತಾಯಿಯಾದರು. ಅವರ ಜೀವನ ಶಿಕ್ಷಣವಿಲ್ಲದೇ ಸಾಗಿತು. ಆದರೀಗ ಅವರಿಗೆ ಶಿಕ್ಷಣ ಪಡೆಯುವ ಉತ್ಸಾಹ ಕಡಿಮೆಯಾಗಿಲ್ಲ' ಎಂದರು.
ಶಾಲೆಯ ಮೊದಲ ದಿನವನ್ನು ವಿವರಿಸಿದ ಸಲೀಮಾ, 'ಮುಖ್ಯೋಪಾಧ್ಯಾಯಿನಿ ನನಗೆ ಪುಸ್ತಕವನ್ನು ಕೊಟ್ಟಾಗ, ಪೆನ್ನು ಹಿಡಿಯಲು ಸಹ ತಿಳಿದಿಲ್ಲದ ನನ್ನ ಕೈಗಳು ನಡುಗುತ್ತಿದ್ದವು. ನಾನು ತುಂಬಾ ನರ್ವಸ್ ಆಗಿದ್ದೆ. ಆದರೆ ನನ್ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ' ಎಂದು ಅವರು ಹೇಳಿದರು.












Click it and Unblock the Notifications