8th Pay Commission; ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಏರಿಕೆ?
ಬೆಂಗಳೂರು, ಜೂನ್ 10: ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಿದೆ. ಭಾನುವಾರ ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಹೊಸ ಸರ್ಕಾರದ ಮೇಲೆ ಜನರಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ಅಪಾರವಾದ ನಿರೀಕ್ಷೆ ಇದೆ. ಜುಲೈ ತಿಂಗಳಿನಲ್ಲಿ ಹೊಸ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಕೇಂದ್ರ ಹಣಕಾಸು ಖಾತೆ ಯಾರಿಗೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಹೊಸ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ 8ನೇ ವೇತನ ಆಯೋಗ ರಚನೆಯ ಘೋಷಣೆಯ ನಿರೀಕ್ಷೆ ಇದೆ.

ಪ್ರತಿ 10 ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ವೇತನ ಆಯೋಗ ರಚನೆ ಮಾಡಿ, ಅದರ ವರದಿ ಪಡೆದು ಅನುಷ್ಠಾನ ಮಾಡಲಾಗುತ್ತದೆ. 2016ರ ಜನವರಿಯಲ್ಲಿ 7ನೇ ವೇತನ ಆಯೋಗ ವರದಿ ನೀಡಿತ್ತು. ಇದರ ಅನ್ವಯ 2026ರ ಜನವರಿಗೆ 8ನೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ, ಅನುಷ್ಠಾನಗೊಳ್ಳಬೇಕಿದೆ.
ಸರ್ಕಾರದ ನಿಲುವು ಏನು?: 8ನೇ ವೇತನ ಆಯೋಗ ರಚನೆ ಮಾಡುವ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. ಎನ್‌ಡಿಎ ಸರ್ಕಾರ 2.0 2023ರ ಡಿಸೆಂಬರ್‌ನಲ್ಲಿ ಈಗ 8ನೇ ವೇತನ ಆಯೋಗ ರಚನೆ ಮಾಡುವ ಪ್ರಸ್ತಾಪವಿಲ್ಲ ಎಂದು ಹೇಳಿತ್ತು. ಆದರೆ ಈಗ ಚುನಾವಣೆ ಮುಗಿದು ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಯಾವ ನಿಲುವು ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.
ಒಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡುವ ತೀರ್ಮಾನ ಮಾಡಿದರೆ ಅದು ವೇತನ, ಭತ್ಯೆ, ಪಿಂಚಣಿ ಮುಂತಾದವುಗಳನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ಸುಮಾರು 12 ರಿಂದ ದ18 ತಿಂಗಳ ಅವಧಿಯನ್ನು ತೆಗೆದುಕೊಳ್ಳಲಿದೆ. ಇನ್ನೂ ದೇಶದಲ್ಲಿ 5 ವರ್ಷ ಲೋಕಸಭೆ ಚುನಾವಣೆ ಇಲ್ಲ. ಆದ್ದರಿಂದ ಹೊಸ ಸರ್ಕಾರ 8ನೇ ವೇತನ ಆಯೋಗ ಯಾವಾಗ ರಚಿಸಲಿದೆ? ಎಂಬುದು ಪ್ರಶ್ನೆ.
8ನೇ ವೇತನ ಆಯೋಗ ರಚನೆಯಾಗಿ ಅದರ ಶಿಫಾರಸು ಜಾರಿಯಾದರೆ ಸುಮಾರು 49 ಲಕ್ಷ ಸರ್ಕಾರಿ ನೌಕರರು, 68 ಲಕ್ಷ ಪಿಂಚಣಿದಾರರಿಗೆ ಸಹಾಯಕವಾಗಲಿದೆ. ವೇತನ, ಭತ್ಯೆಗಳು ಹೆಚ್ಚಾಗಲಿವೆ. 8ನೇ ವೇತನ ಆಯೋಗದ ಶಿಫಾರಸು ಅನ್ವಯ ಫಿಟ್‌ಮೆಂಟ್ ಸೌಲಭ್ಯಗಳು ಸೇರಿ ಕೇಂದ್ರ ಸರ್ಕಾರ ನೌಕರರ ಮೂಲ ವೇತನ 8 ರಿಂದ 26 ಸಾವಿರ ರೂ. ತನಕ ಏರಿಕೆಯಾಗುವ ನಿರೀಕ್ಷೆ ಇದೆ.
7ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರಿಗೆ 2.57ರಷ್ಟು ಫಿಟ್‌ಮೆಂಟ್ ಸೌಲಭ್ಯದ ಶಿಫಾರಸು ಮಾಡಿತ್ತು. ಬಳಿಕ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18,0000 ರೂ.ಗಳಿಗೆ ಏರಿಕೆಯಾಗಿತ್ತು. 8ನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದರೆ ವೇತನದ ಜೊತೆ ವಿವಿಧ ಭತ್ಯೆಗಳು, ಪಿಂಚಣಿ ವ್ಯವಸ್ಥೆಯಲ್ಲಿ ಸಹ ಬದಲಾವಣೆಯಾಗಲಿದೆ.
ಬದಲಾಗುತ್ತಿರುವ ಜೀವನ ಶೈಲಿಗೆ ಅನುಗುಣವಾಗಿ ವೇತನವೂ ಏರಿಕೆಯಾಗಬೇಕಿದೆ. 8ನೇ ವೇತನ ಆಯೋಗ ರಚನೆಯಾಗಿ ಅದರ ವರದಿ ಅನುಷ್ಠಾನವಾಗಬೇಕು ಎಂದು ಸರ್ಕಾರಿ ನೌಕರರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೇಂದ್ರದ ಹೊಸ ಸರ್ಕಾರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications