ಸಾಧನೆಗೆ ವಯಸ್ಸಿನ ಹಂಗಿಲ್ಲ: 85ನೇ ವಯಸ್ಸಿನಲ್ಲಿ MA ಪದವಿ ಪಡೆದು Phd ಅತ್ತ ಹೆಜ್ಜೆ ಹಾಕುತ್ತಿರುವ ಮಾಜಿ ಯೋಧ

ಸಾಧನೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ, ಕಲಿಯುವ ಛಲವೊಂದಿದ್ದರೆ ಯಾವುದೇ ವಯಸ್ಸಿನಲ್ಲಿಯೂ ಅಂದುಕೊಂಡಿದ್ದನ್ನ ಕಲಿಯಬಹುದು, ಸಾಧಿಸಬಹುದು ಎಂಬ ಮಾತಿದೆ. ಈ ಮಾತನ್ನ ಹರಿಯಾಣದ 85 ವರ್ಷದ ಹಿರಿಯರೊಬ್ಬರು ನಿಜ ಮಾಡಿ ತೋರಿಸಿದ್ದಾರೆ. ಕನಸುಗಳಿಗೆ ಎಂದಿಗೂ ಎಕ್ಸ್‌ಪೈರಿ ಡೇಟ್ ಇರುವುದಿಲ್ಲ ಎಂಬುದಕ್ಕೆ ಹರಿಯಾಣದ ಸಿರ್ಸಾ ಮೂಲದ ಲಾಲ್ ಚಂದ್ ಗೋದಾರ ಅವರೇ ಒಂದು ಒಳ್ಳೆ ಉದಾಹರಣೆ.

ಭಾರತೀಯ ಸೇನೆಯಲ್ಲಿ ಯೋಧರಾಗಿ ದೇಶ ಸೇವೆ ಮಾಡಿ ನಿವೃತ್ತರಾಗಿದ್ದ ಇವರು, ಇದೀಗ ತಮ್ಮ 85ನೇ ವಯಸ್ಸಿನಲ್ಲಿ ಸ್ನಾತಕೋತ್ತರ (ಎಂಎ) ಪದವಿ ಪಡೆಯುವ ಮೂಲಕ ಯುವಜನತೆಗೆ ದೊಡ್ಡ ಮಾದರಿಯಾಗಿದ್ದಾರೆ.

85 Year Old Ex Soldier Lal Chand Godara Earns MA Degree Proves Age Is Just A Number For Education

76ನೇ ವಯಸ್ಸಿನಲ್ಲಿ ಓದಿನತ್ತ ಒಲವು

ಲಾಲ್ ಚಂದ್ ಗೋದಾರ ಅವರು ತಮ್ಮ ಯೌವನದಲ್ಲಿಯೇ ಪುಸ್ತಕಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಆದರೆ ವೃತ್ತಿಜೀವನ, ಸೇನೆಯ ಜವಾಬ್ದಾರಿಗಳು ಮತ್ತು ಕೌಟುಂಬಿಕ ಕಾರಣಗಳಿಂದಾಗಿ ಅವರ ಶಿಕ್ಷಣ ಬಹುಬೇಗನೆ ಅರ್ಧಕ್ಕೆ ನಿಂತಿತ್ತು. ದಶಕಗಳ ಬಳಿಕ, ಅಂದರೆ ತಮ್ಮ 76ನೇ ವಯಸ್ಸಿನಲ್ಲಿ ಅವರು ಮತ್ತೆ ಪುಸ್ತಕಗಳನ್ನ ಕೈಗೆತ್ತಿಕೊಂಡರು. ಇದಕ್ಕೆ ಮುಖ್ಯ ಕಾರಣ ಅವರ ಮೊಮ್ಮಕ್ಕಳು.

ಹೌದು, ಮೊಮ್ಮಕ್ಕಳು ಕೇಳುತ್ತಿದ್ದ ಸಾಮಾನ್ಯ ಜ್ಞಾನ ಹಾಗೂ ಇತಿಹಾಸದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಅವರೊಂದಿಗೆ ವಿಷಯಗಳನ್ನ ಹಂಚಿಕೊಳ್ಳಲು ಗೋದಾರ ಅವರು ಮತ್ತೆ ಓದುವ ಹವ್ಯಾಸವನ್ನ ರೂಢಿಸಿಕೊಂಡರು. ಈ ಹವ್ಯಾಸವೇ ಅವರನ್ನ ಔಪಚಾರಿಕ ಶಿಕ್ಷಣದತ್ತ ಮರಳುವಂತೆ ಮಾಡಿತು.

ಪರಿಣಾಮವಾಗಿ, ತಮ್ಮ 81ನೇ ವಯಸ್ಸಿನಲ್ಲಿ ಅವರು ಬಿಎ (BA) ಪದವಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಇಗ್ನೋ ಮೂಲಕ ಎಂಎ ಪದವಿ

ಪದವಿ ಮುಗಿಸಿದ ನಂತರವೂ ಅವರಲ್ಲಿದ್ದ ಕಲಿಯುವ ಹಸಿವು ತಣಿಯಲಿಲ್ಲ. ಹೀಗಾಗಿ ಅವರು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಮುಂದಾದರು. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಮೂಲಕ ಎಂಎ ಪ್ರವೇಶಾತಿ ಪಡೆದ ಅವರು, ಪ್ರತಿದಿನ ಶ್ರದ್ಧೆಯಿಂದ ವ್ಯಾಸಂಗ ಮಾಡಿದರು.

ಇಳಿ ವಯಸ್ಸಿನಲ್ಲಿ ಜ್ಞಾಪಕಶಕ್ತಿ ಕಡಿಮೆಯಾಗುವುದು ಸಹಜ, ಆದರೂ ಛಲಬಿಡದೆ ಓದಿನಲ್ಲಿ ತಲ್ಲೀನರಾದ ಅವರು, ಇದೀಗ ಯಶಸ್ವಿಯಾಗಿ ಎಂಎ ಪದವಿಯನ್ನ ಪೂರ್ಣಗೊಳಿಸಿದ್ದಾರೆ. ಯಾವುದೇ ರೆಗ್ಯುಲರ್ ತರಗತಿಗಳಿಲ್ಲದೆ, ಕೇವಲ ಸ್ವಯಂ ಅಧ್ಯಯನದ ಮೂಲಕ ಅವರು ಸಾಧಿಸಿರುವ ಈ ಮೈಲಿಗಲ್ಲು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.

ಮಾಸ್ಟರ್ಸ್ ಅಥ್ಲೆಟಿಕ್ಸ್ ಮತ್ತು ಮುಂದಿನ ಗುರಿ

ಲಾಲ್ ಚಂದ್ ಗೋದಾರ ಅವರ ಸಾಧನೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಸೇನೆಯಲ್ಲಿದ್ದಾಗಿನ ಶಿಸ್ತು ಮತ್ತು ದೈಹಿಕ ಫಿಟ್‌ನೆಸ್ ಅನ್ನು ಇಂದಿಗೂ ಕಾಪಾಡಿಕೊಂಡಿರುವ ಇವರು, 'ಮಾಸ್ಟರ್ಸ್ ಅಥ್ಲೆಟಿಕ್ಸ್' ಕ್ರೀಡಾಕೂಟಗಳಲ್ಲೂ ಭಾಗವಹಿಸಿ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.

85ನೇ ವಯಸ್ಸಿನಲ್ಲಿ ಎಂಎ ಮುಗಿಸಿರುವ ಅವರು, ತಮ್ಮ ಶೈಕ್ಷಣಿಕ ಪಯಣವನ್ನ ಇಲ್ಲಿಗೇ ನಿಲ್ಲಿಸಲು ಸಿದ್ಧರಿಲ್ಲ. ಅವರ ಮುಂದಿನ ಗುರಿ ಪಿಎಚ್‌ಡಿ ಮಾಡುವುದು ಅಥವಾ ಕಾನೂನು ಪದವಿ ಪಡೆಯುವುದು. ಕಲಿಯಲು ಮನಸ್ಸಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನ ಅವರು ಜಗತ್ತಿಗೆ ಸಾರಿದ್ದಾರೆ.

ಅನೇಕ ಯುವಕರು ಸಣ್ಣಪುಟ್ಟ ಸೋಲುಗಳಿಗೆ ನಿರಾಸೆಗೊಂಡು ಪ್ರಯತ್ನವನ್ನೇ ಕೈಬಿಡುತ್ತಿರುವ ಇಂದಿನ ದಿನಗಳಲ್ಲಿ, 85ರ ಹರೆಯದಲ್ಲಿ ಹೊಸ ಗುರಿಯತ್ತ ಹೆಜ್ಜೆ ಹಾಕುತ್ತಿರುವ ಈ ಮಾಜಿ ಯೋಧನ ಕಥೆ ಪ್ರತಿಯೊಬ್ಬರಿಗೂ ದೊಡ್ಡ ಸ್ಫೂರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+