7th Pay Commission: ಹೋಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ವಿಶೇಷ ಉಡುಗೊರೆ; 4% ತುಟ್ಟಿಭತ್ಯೆ ಹೆಚ್ಚಳ
ಲಕ್ನೋ, ಮಾರ್ಚ್ 13: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಹೋಳಿ ಹಬ್ಬದ ಮೊದಲು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಯಲ್ಲಿ 4 ಪ್ರತಿಶತ ಹೆಚ್ಚಳವನ್ನು ಅನುಮೋದಿಸಿದೆ. ಈ ಮೂಲಕ ಹೋಳಿ ಹಬ್ಬಕ್ಕೆ ತಮ್ಮ ರಾಜ್ಯ ಸರ್ಕಾರಿ ನೌಕರರಿಗೆ ಉಡುಗೊರೆ ನೀಡಿದೆ.
ಸರ್ಕಾರ ತುಟ್ಟಿಭತ್ಯೆ ಅಂದರೆ ಡಿಎಯನ್ನು ಶೇಕಡಾ 4ರಷ್ಟು ಹೆಚ್ಚಿಸಿದೆ. ಸರ್ಕಾರವು ಪಿಂಚಣಿದಾರರಿಗೆ ಡಿಯರ್‌ನೆಸ್ ರಿಲೀಫ್ ಅಥವಾ ಡಿಆರ್ ಅನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಇದರಿಂದ ರಾಜ್ಯದ 10 ಲಕ್ಷ ನೌಕರರು, 12 ಲಕ್ಷ ಪಿಂಚಣಿದಾರರು ಮತ್ತು 8 ಲಕ್ಷ ಶಿಕ್ಷಕರಿಗೆ ಅನುಕೂಲವಾಗಲಿದೆ.

ಕರ್ನಾಟಕ, ಉತ್ತರ ಪ್ರದೇಶ ಮಾತ್ರವಲ್ಲ, ಗುಜರಾತ್ ರಾಜ್ಯವೂ ಸಹ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸರ್ಕಾರವು ರಾಜ್ಯ ನೌಕರರಿಗೆ ಹೋಳಿ ಹಬ್ಬದ ಉಡುಗೊರೆ ಘೋಷಿಸಿದೆ. ಈ ರಾಜ್ಯದಲ್ಲಿಯೂ ಕೂಡ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 4% ರಷ್ಟು ಹೆಚ್ಚಿಸಿದೆ.
ರಾಜ್ಯ ಸರ್ಕಾರವು ತನ್ನ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಕೊಡುಗೆಯನ್ನು 4 ಪ್ರತಿಶತದಷ್ಟು ಹೆಚ್ಚಿಸಿದೆ ಮತ್ತು 7 ನೇ ವೇತನ ಆಯೋಗದ ಆಧಾರದ ಮೇಲೆ ಎಲ್‌ಟಿಸಿ ನಗದು ಪರಿವರ್ತನೆಯನ್ನು ಲೆಕ್ಕಾಚಾರ ಮಾಡುತ್ತದೆ. ಈ ಬದಲಾವಣೆ ಮಾರ್ಚ್ 12 ರಿಂದಲೇ ಜಾರಿಗೆ ಬರಲಿದೆ.
ಹೊಸ ಡಿಎ ಹೆಚ್ಚಳದಿಂದ ರಾಜ್ಯ ಸರ್ಕಾರಿ ನೌಕರರ ಒಟ್ಟು ತುಟ್ಟಿ ಭತ್ಯೆ ಶೇಕಡಾ 46ಕ್ಕೆ ಏರಿಕೆಯಾಗಲಿದೆ. ಹೊಸ ಡಿಎ ಹೆಚ್ಚಳ ಜನವರಿ 1 ರಿಂದ ಜಾರಿಗೆ ಬರಲಿದ್ದು, ಸರ್ಕಾರಿ ನೌಕರರಿಗೆ ಕಳೆದ ಎಂಟು ತಿಂಗಳ ಬಾಕಿ ವೇತನ ನೀಡಲಾಗುವುದು. ಸರ್ಕಾರ ತೆಗೆದುಕೊಂಡಿರುವ ಇತ್ತೀಚಿನ ಕ್ರಮವು ಸುಮಾರು 4.45 ಲಕ್ಷ ರಾಜ್ಯ ಸರ್ಕಾರಿ ನೌಕರರು ಮತ್ತು 4.63 ಲಕ್ಷ ಪಿಂಚಣಿದಾರರಿಗೆ ಅನುಕೂಲ ನೀಡಲಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.

ಕರ್ನಾಟಕದಲ್ಲೂ ತುಟ್ಟಿಭತ್ಯೆ ಹೆಚ್ಚಳ
ಇನ್ನು ರಾಜ್ಯದಲ್ಲಿಯೂ ಏಳನೇ ವೇತನ ಆಯೋಗದ ವರದಿ ಜಾರಿಗೆ ಒತ್ತಡ ಬರುತ್ತಿದೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಹೆಚ್ಚಳ ಜನವರಿ 1, 2024ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜನವರಿ 2024 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 38.75 ರಿಂದ ಶೇಕಡ 42.5ಗೆ ಪರಿಷ್ಕರಿಸಿ ಮಂಜೂರು ಮಾಡಲು ಆದೇಶ ನೀಡಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4ರಷ್ಟು ಹೆಚ್ಚಿಸಲು ನರೇಂದ್ರ ಮೋದಿ ಸರ್ಕಾರ ಗುರುವಾರ ಅನುಮೋದನೆ ನೀಡಿದೆ. ಇದರ ಜೊತೆಗೆ ಕೇಂದ್ರ ಸಚಿವ ಸಂಪುಟವು 2024-25ರ ಸೀಸನ್‌ಗೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕ್ವಿಂಟಲ್‌ಗೆ ರೂ 5,335 ಕ್ಕೆ ಅನುಮೋದಿಸಿದೆ. ಇದು ಹಿಂದಿನ ಋತುವಿಗಿಂತ ಕ್ವಿಂಟಲ್‌ಗೆ ರೂ 285 ಹೆಚ್ಚಳವಾಗಿದೆ.












Click it and Unblock the Notifications