7th Pay Commission: ಈ ಬ್ಯಾಂಕ್ ಉದ್ಯೋಗಿಗಳಿಗೆ ಶೇ 4ರಷ್ಟು ತುಟ್ಟಿಭತ್ಯೆ ಲಭ್ಯ
ನವದೆಹಲಿ, ಅಕ್ಟೋಬರ್ 21: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ (ಡಿಎ)ಯನ್ನು ಶೇ. 3ರಷ್ಟು ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರಕ್ಕೆ ಸಂಪುಟದ ಅನುಮೋದನೆಯನ್ನು ನೀಡಿದೆ. ಈಗ 7ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಅಕ್ಟೋಬರ್ ತಿಂಗಳ ವೇತನದಲ್ಲಿ ಈ ನೌಕರರಿಗೆ ಶೇ 4ರಷ್ಟು ಡಿಎ ಸಿಗದಲಿದೆ. ಈ ಕುರಿತು ವಿವರ ಇಲ್ಲಿದೆ.
ಕಂಗ್ರಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (ಕೆಸಿಸಿಬಿ) ಈ ಕುರಿತು ಘೋಷಣೆಯನ್ನು ಮಾಡಿದೆ, ಉದ್ಯೋಗಿಗಳಿಗೆ ಕೊಡುಗೆಯನ್ನು ಕೊಟ್ಟಿದೆ. ಬ್ಯಾಂಕ್‌ನಲ್ಲಿ 1,300 ಉದ್ಯೋಗಿಗಳಿದ್ದು, ಪೂರ್ವಾನ್ವಯವಾಗುವಂತೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಉದ್ಯೋಗಿಗಳು ಅಕ್ಟೋಬರ್ ವೇತನದಲ್ಲಿ ಪಡೆಯಲಿದ್ದಾರೆ.

ಕಂಗ್ರಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಕುಲದೀಪ್ ಸಿಂಗ್ ಪಠಾಣಿಯಾ ಈ ಕುರಿತು ಖಚಿತಪಡಿಸಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಈ ಕುರಿತು ತಯಾರಿ ನಡೆಸಿದ್ದು, ವ್ಯವಸ್ಥಾಪಕ ನಿರ್ದೇಶಕರೇ ಶೇ 4ರಷ್ಟು ಡಿಎ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದರು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಬ್ಯಾಂಕ್ ಉದ್ಯೋಗಿಗಳಿಗೆ ಮಾತ್ರವಲ್ಲ, ಸಮಾಜದ ಪ್ರತಿ ವಲಯದ ಜನರ ಹಿತವನ್ನು ಕಾಪಾಡುತ್ತಾರೆ ಎಂದು ಕುಲದೀಪ್ ಸಿಂಗ್ ಪಠಾಣಿಯಾ ಹೇಳಿದ್ದಾರೆ.
ಬ್ಯಾಂಕ್ ಲಾಭದಲ್ಲಿ: 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಪೂರ್ವಾನ್ವಯವಾಗುವಂತೆ ನೌಕರರಿಗಾಗಿ ಕಂಗ್ರಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ 45 ಕೋಟಿ ರೂ. ಖರ್ಚು ಮಾಡಿದರೂ ಸಹ 2024, ಮಾರ್ಚ್ 31ಕ್ಕೆ ಬ್ಯಾಂಕ್ 64.27 ಕೋಟಿ ರೂ. ಲಾಭದಲ್ಲಿದೆ. ಈ ಅವಧಿಯಲ್ಲಿ ಠೇವಣಿ ಮತ್ತು ಸಾಲಗಳು ಸಹ ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಬ್ಯಾಂಕ್ ಸುಮಾರು 70.18 ಕೋಟಿ ಲಾಭವನ್ನು ಮಾಡಿದೆ. ಹಬ್ಬದ ಸಂದರ್ಭದಲ್ಲಿ ಬ್ಯಾಂಕ್ ಪ್ರೊಸೆಸಿಂಗ್ ಫೀ ಕಡಿತ ಸೇರಿದಂತೆ ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ.
ಮಾಹಿತಿಗಳ ಪ್ರಕಾರ ಕಂಗ್ರಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಅನುತ್ಪಾದಕ ಆಸ್ತಿಗಳು ಬೆಳವಣಿಗೆಯಾಗಿವೆ. ಇದು ಶೇ 15.31 ರಿಂದ ಶೇ 7.15ಕ್ಕೆ ಇಳಿಕೆಯಾಗಿದೆ. 2022ರ ಮಾರ್ಚ್ 31ಕ್ಕೆ ಎನ್‌ಪಿಎ ಶೇ 29.60 ಇತ್ತು. 2024ರ ಮಾರ್ಚ್‌ನಲ್ಲಿ ಇದು 23.45 ಆಗಿದೆ. ಈ ಬೆಳವಣಿಗೆ ಒಂದು ಬಾರಿ ಪರಿಹಾರ (ಒಟಿಎಸ್) ಪಾವತಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಸಹಾಯಕವಾಗಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಬ್ಯಾಂಕ್‌ನ ಸಮಿತಿ ಅಭಿವೃದ್ಧಿಗೊಳಿಸಿದ ಒಂದು ಬಾರಿ ಪರಿಹಾರ (ಒಟಿಎಸ್) ನೀಡಲು ಬ್ಯಾಂಕ್ ಒಪ್ಪಿಗೆ ನೀಡಿದೆ. ಇದು ಅಕ್ಟೋಬರ್ 30, 2024ರಿಂದಲೇ ಜಾರಿಗೆ ಬರಲಿದೆ.
ಈ ಒಂದು ಬಾರಿ ಪರಿಹಾರ (ಒಟಿಎಸ್) ನೀತಿ ಬ್ಯಾಂಕ್‌ನ ಎನ್‌ಪಿಎ ಅನ್ನು ಇನ್ನಷ್ಟು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಬ್ಯಾಂಕ್ ಸಾಲ ಮರುಪಾವತಿ ವಿಚಾರದಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಲ ಪಡೆದವರಿಗೆ ಹೊಸ ಹೊಸ ಯೋಜನೆ ಘೋಷಣೆ ಮಾಡುವ ಮೂಲಕ ಕಂತು ಕಟ್ಟುವಂತೆ ಪ್ರೋತ್ಸಾಹಿಸುತ್ತಿದೆ.
ಬ್ಯಾಂಕ್‌ನ ಹೊಸ ಒಂದು ಬಾರಿ ಪರಿಹಾರ (ಒಟಿಎಸ್) ನೀತಿ ಘೋಷಣೆಯಾಗಿ, ಸಂಪೂರ್ಣವಾಗಿ ಜಾರಿಗೊಂಡ ಬಳಿಕ ಎನ್‌ಪಿಎ ಇನ್ನಷ್ಟು ಕಡಿತವಾಗಲಿದೆ. ಇದು ಶೇ 5ರಷ್ಟು ಇಳಿಕೆಯಾಗಲಿದೆ ಮತ್ತು ಒಟ್ಟು ಎನ್‌ಪಿಎ ಶೇ 20ಕ್ಕಿಂತ ಕಡಿಮೆಯಾಗಲಿದೆ ಎಂದು ಕುಲದೀಪ್ ಸಿಂಗ್ ಪಠಾಣಿಯಾ ಅಂದಾಜಿಸಿದ್ದಾರೆ.












Click it and Unblock the Notifications