7th Pay Commission: ಮಣಿಪುರದ ಸರ್ಕಾರಿ ನೌಕರರಿಗೆ ಡಿಎ ಏರಿಕೆ ಬಂಪರ್ ಕೊಡುಗೆ
ನವದೆಹಲಿ, ಜನವರಿ 01: ಹೊಸ ವರ್ಷ ಆರಂಭವಾಗುವ ಕೆಲವೇ ಹೊತ್ತಿಗೆ ಮೊದಲು ಮಣಿಪುರ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 7ನೇ ವೇತನ ಆಯೋಗದ ವರದಿಯ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ರಾಜ್ಯ ಸರ್ಕಾರಿ ನೌಕರರು ಶೇ 32ರ ಬದಲು ಶೇ 39ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ.
ಈ ಕುರಿತ ಕಡತಕ್ಕೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಹಿ ಹಾಕಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಶೇ 7ರಷ್ಟು ತುಟ್ಟಿಭತ್ಯೆ (ಡಿಎ) ಏರಿಕೆ ಮಾಡಿದೆ. ರಾಜ್ಯದಲ್ಲಿನ ಹೊಸ ಮೂಲ ಸೌಲಭ್ಯ ಯೋಜನೆಗಳು, ಸ್ಟಾರ್ಟ್ ಅಪ್‌ಗಳಿಗೆ ನೀಡಿರುವ ಆದ್ಯತೆಯ ಕುರಿತು ಸಹ ಮುಖ್ಯಮಂತ್ರಿಗಳು ವಿವರಣೆ ನೀಡಿದ್ದಾರೆ.

ಜನವರಿ ತಿಂಗಳ ವೇತನದಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಶೇ 7ರಷ್ಟು ತುಟ್ಟಿಭತ್ಯೆ (ಡಿಎ) ಏರಿಕೆ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ಇದರಿಂದಾಗಿ ಸಾವಿರಾರು ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಸರ್ಕಾರಿ ನೌಕರರ ವೇತನದಲ್ಲಿಯೂ ಏರಿಕೆಯಾಗಲಿದೆ.
ಮುಖ್ಯಮಂತ್ರಿಗಳ ಉದ್ಯೋಗ ಸಹಾಯ ಯೋಜನೆಯ ಅನ್ವಯ ಹಿಂಸಾಚಾರದ ಸಂದರ್ಭದಲ್ಲಿ ಬೇರೆ ಕಡೆ ಸ್ಥಳಾಂತರಗೊಂಡ 426 ಜನರಿಗೆ ಅಡಮಾನ ರಹಿತವಾದ ಸಾಲವನ್ನು ನೀಡಲಾಗುತ್ತಿದೆ. 50 ಸಾವಿರ ರೂ. ತನಕ ಈ ಸಾಲ ದೊರೆಯಲಿದ್ದು, ಅವರು ಹೊಸ ಉದ್ಯಮ ಆರಂಭಿಸಲು ಯೋಜನೆ ಅನ್ವಯ ಸಹಕಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಎಷ್ಟು ಉದ್ಯೋಗ ಸೃಷ್ಟಿ: ಹಿಂಸಚಾರದಿಂದ ಸ್ಥಳಾಂತರಗೊಂಡ ಜನರಿಗೆ ಉದ್ಯೋಗ ಒದಗಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈಗಾಗಲೇ 7 ಸ್ಟಾರ್ಟ್ ಅಪ್‌ಗಳನ್ನು ಗುರುತಿಸಲಾಗಿದೆ. ಇವುಗಳು 432 ಸ್ಥಳಾಂತರಗೊಂಡ ಜನರಿಗೆ ಉದ್ಯೋಗ ನೀಡಲಿವೆ. 500 ಯುವಕರಿಗೆ ವಿಮಾನಯಾನ ಸಂಸ್ಥೆಗಳಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಣೆ ಮಾಡಲು ದೆಹಲಿಯಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಮಣಿಪುರ ಪ್ರವಾಸೋದ್ಯಮ ಇಲಾಖೆಯಿಂದ ಈ ಮಾದರಿ ಕೌಶಲ್ಯ ತರಬೇತಿಗೆ ಅನುದಾನ ನೀಡಲಾಗುತ್ತದೆ. ಈ ತರಬೇತಿಗೆ ಹಿಂಸಾಚಾರದಿಂದ ಸ್ಥಳಾಂತರಗೊಂಡ ಕುಟುಂಬಗಳ ಯುವಕರನ್ನು ಗುರುತಿಸಿ, ಮೊದಲ ಆದ್ಯತೆ ನೀಡಲಾಗುತ್ತದೆ. 'ಒಂದು ಕುಟುಂಬ ಒಂದು ಜೀವನೋಪಾಯ' ಎಂಬ ಯೋಜನೆ ಅಡಿ ಶೇ 30ರಷ್ಟು ಸಬ್ಸಿಡಿ ದರದಲ್ಲಿ 10 ಲಕ್ಷದ ತನಕ 5 ಸಾವಿರ ಜನರಿಗೆ ಸಾಲ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
'ಒಂದು ಕುಟುಂಬ ಒಂದು ಜೀವನೋಪಾಯ' ಎಂಬ ಯೋಜನೆ ಅಡಿ ಸಾಲ ನೀಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. 745 ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.
ಸರ್ಕಾರ ರಾಜ್ಯಕ್ಕೆ ವಿಮಾನ ಸಂಪರ್ಕ ಉತ್ತಮಗೊಳಿಸಲು ಸಹ ಪ್ರಯತ್ನ ನಡೆಸುತ್ತಿದೆ. ಅಲಯನ್ಸ್ ಏರ್ ಜೊತೆ ಮಾತುಕತೆ ನಡೆಸಿ ಇಂಫಾಲಕ್ಕೆ ಮೂರು ಹೊಸ ವಿಮಾನ ಸೇವೆಯನ್ನು ತರಲಾಗಿದೆ. 2025ರಲ್ಲಿ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಹೊಸ ವಿಮಾನ ಸೇವೆಯ ದರಗಳನ್ನು 5 ಸಾವಿರಕ್ಕೆ ಮಿತಿಗೊಳಿಸಲಾಗುತ್ತದೆ. ವಿಮಾನದ ಇತರ ಟಿಕೆಟ್ ದರವನ್ನು ರಾಜ್ಯ ಸರ್ಕಾರ ಭರಿಸಲಿದೆ. ರಾಜ್ಯಕ್ಕೆ ಹೆಚ್ಚು ಉದ್ಯಮಿಗಳನ್ನು ಸೆಳೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿಗಳು ವಿವರಣೆ ನೀಡಿದ್ದಾರೆ.












Click it and Unblock the Notifications