Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಭೂಕಂಪ: ಬೆಚ್ಚಿಬಿದ್ದ ಜನ!
ಶ್ರೀನಗರ ನವೆಂಬರ್ 13: ದೇಶದ ಹಲವು ಪ್ರದೇಶಗಳಲ್ಲಿ ಇಂದು ಚುನಾವಣೆ ನಡೆಯುತ್ತಿದ್ದರೆ ಇತ್ತ ಜಮ್ಮು ಕಾಶ್ಮೀರದಲ್ಲಿ ಭೂಕಂಪನದ ಅನುಭವವಾಗಿದೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂದು ಬೆಳಗ್ಗೆ 10:43ಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ 5.2 ತೀವ್ರತೆಯಲ್ಲಿ ಭೂಕಂಪನವಾಗಿದೆ.
ಹೌದು... ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ (ನವೆಂಬರ್ 13) 5.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಜನ ಆತಂಕಗೊಂಡಿದ್ದಾರೆ. ಆದರೆ ಯಾವುದೇ ಜೀವ ಅಥವಾ ಆಸ್ತಿ ನಷ್ಟದ ವರದಿಗಳು ಲಭ್ಯವಾಗಿಲ್ಲ. ಅಫ್ಘಾನಿಸ್ತಾನ ಪ್ರದೇಶದಲ್ಲಿ ಬೆಳಗ್ಗೆ 10:43ಕ್ಕೆ ಭೂಕಂಪ ಸಂಭವಿಸಿರುವ ವರದಿಯಾಗಿದೆ. ಕಾಶ್ಮೀರ ಕಣಿವೆಯಲ್ಲೂ ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ.

ನವೆಂಬರ್ 10ರಂದು ದೇಶದ ಹಲವೆಡೆ ಭೂಕಂಪ
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭಾನುವಾರವೂ ಭಾರೀ ಭೂಕಂಪನಗಳು ಸಂಭವಿಸಿವೆ. ಭಾರತದ ರಾಜಸ್ಥಾನ ಸೇರಿದಂತೆ ತಜಕಿಸ್ತಾನ, ಇಂಡೋನೇಷ್ಯಾ ಮತ್ತು ಕ್ಯೂಬಾದಲ್ಲಿ ತೀವ್ರತರವಾದ ಭೂಕಂಪ ಸಂಭವಿಸಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಹಾಗಾದರೆ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಭಾನುವಾರ (ನವೆಂಬರ್ 10) ಭೂಕಂಪನವಾಗಿದೆ? ಇದರ ಸಂಪೂರ್ಣ ವರದಿ ಇಲ್ಲಿದೆ...
ಭಾನುವಾರ ಪೂರ್ವ ಕ್ಯೂಬಾದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿಯ ಪ್ರಕಾರ ಭೂಕಂಪನ ಬಾರ್ಟೋಲೋಮ್ ಮಾಸೊದಿಂದ ದಕ್ಷಿಣಕ್ಕೆ 40 ಕಿಮೀ ದೂರದಲ್ಲಿತ್ತು. ಸ್ಯಾಂಟಿಯಾಗೊ ಡಿ ಕ್ಯೂಬಾದಂತಹ ಪ್ರಮುಖ ನಗರಗಳನ್ನು ಒಳಗೊಂಡಂತೆ ಪೂರ್ವ ಕ್ಯೂಬಾದಾದ್ಯಂತ ಕಂಪನಗಳಾಗಿತ್ತು. ಈ ಅವಧಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ವರದಿಗಳು ಆಗಿಲ್ಲ.
ನವೆಂಬರ್ 10ರಂದು ಇಂಡೋನೇಷ್ಯಾದಲ್ಲಿ ಭೂಕಂಪನ
ಇನ್ನೂ ಇಂಡೋನೇಷ್ಯಾದ ಪೂರ್ವ ದಕ್ಷಿಣ ಪಪುವಾ ಪ್ರಾಂತ್ಯದಲ್ಲಿ ಭಾನುವಾರ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕ್ಯೂಬಾದ ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಪ್ರಕಾರ, ಭೂಕಂಪ ಭಾನುವಾರ (2120 GMT ಶನಿವಾರ) ಮುಂಜಾನೆ 4:20ಕ್ಕೆ (ಜಕಾರ್ತಾ ಸಮಯ) ಸಂಭವಿಸಿದ್ದು, ಇದರ ಕೇಂದ್ರಬಿಂದು ಅಸ್ಮತ್ ರೀಜೆನ್ಸಿಯ ವಾಯುವ್ಯಕ್ಕೆ 69 ಕಿಮೀ ಮತ್ತು 10 ಕಿಮೀ ಆಳದಲ್ಲಿದೆ. ಭೂಕಂಪದಿಂದ ದೊಡ್ಡ ಅಲೆಗಳು ಏಳುವ ಸಾಧ್ಯತೆ ಇಲ್ಲದಿರುವುದರಿಂದ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ವರದಿ ತಿಳಿಸಿದೆ.
ಭಾರತದಲ್ಲೂ ನವೆಂಬರ್ 10ರಂದು ಭೂಕಂಪ
ಭಾನುವಾರ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೌಂಟ್ ಅಬುದಲ್ಲಿ ಭೂಕಂಪ ಸಂಭವಿಸಿತ್ತು. ಬೆಳಗ್ಗೆ 7.52ಕ್ಕೆ ಭೂಕಂಪನದ ಅನುಭವವಾಗಿತ್ತು. ಅಲ್ಲದೆ ಮೌಂಟ್ ಅಬು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿತ್ತು.
ನವೆಂಬರ್ 10ರಂದು ತಜಕಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ
ತಜಕಿಸ್ತಾನದಲ್ಲೂ ಭಾನುವಾರ ಭೂಕಂಪನ ಸಂಭವಿಸಿತ್ತು. ತಜಕಿಸ್ತಾನದಲ್ಲಿ 4.6ರಷ್ಟು ತೀವ್ರತೆ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಇದು ರಾತ್ರಿ 7:48 ಕ್ಕೆ (SIT) 145 ಕಿಮೀ ಆಳದಲ್ಲಿ ಸಂಭವಿಸಿದೆ, ಅದರ ಕೇಂದ್ರಬಿಂದು ಅಕ್ಷಾಂಶ 37.48 N ಮತ್ತು ರೇಖಾಂಶ 72.39 Eದಲ್ಲಿದೆ.












Click it and Unblock the Notifications