ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಸುದ್ದಿ: ಎಚ್‌ಐವಿಗೆ 47 ವಿದ್ಯಾರ್ಥಿಗಳು ಬಲಿ, 800ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್
ತ್ರಿಪುರಾ, ಜುಲೈ, 09: ತ್ರಿಪುರಾದಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವಂತಹ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯದ ಒಟ್ಟು 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 47 ವಿದ್ಯಾರ್ಥಿಗಳು ಏಡ್ಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಮೂಲ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಈವರೆಗೆ ಒಟ್ಟು 828 ವಿದ್ಯಾರ್ಥಿಗಳು ಎಚ್‌ಐವಿ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ 572 ವಿದ್ಯಾರ್ಥಿಗಳು ಇನ್ನೂ ಬದುಕಿದ್ದು, 47 ವಿದ್ಯಾರ್ಥಿಗಳು ಏಡ್ಸ್ ವೈರಸ್‌ಗೆ ಸಾವನ್ನಪ್ಪಿದ್ದಾರೆ ಎಂದು ತ್ರಿಪುರಾ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಷ್ಟೆ ಅಲ್ಲದೆ ಬಹುತೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ದೇಶದ ಹಲವು ಪ್ರಾಂತ್ಯಗಳಲ್ಲಿ ಇರುವ ಶಿಕ್ಷಣ ಸಂಸ್ಥೆಗಳಿಗೆ ತೆರಳಿದ್ದರು ಅಂತಲೂ ತಿಳಿಸಿದ್ದಾರೆ.

ತ್ರಿಪುರಾ ರಾಜ್ಯದ 220 ಶಾಲೆಗಳು ಮತ್ತು 24 ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ವಿಚಾರ ಬೆಳಕಿದೆ ಬಂದಿದೆ ಎಂದಿರುವ ತ್ರಿಪುರಾ ಏಡ್ಸ್ ನಿಯಂತ್ರಣ ಸೊಸೈಟಿ, ಎಚ್‌ಐವಿ ಸೋಂಕು ಹರಡಲು ಇದು ಪ್ರಮುಖ ಕಾರಣವಾಗಿರಬಹುದು ಎಂದು ಹೇಳಲಾಗಿದೆ.
ಈ ಕುರಿತು ತ್ರಿಪುರಾ ರಾಜ್ಯಾದ್ಯಂತ ಸುಮಾರು 164 ಆರೋಗ್ಯ ಸಂಸ್ಥೆಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು, ಸಮಗ್ರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏಡ್ಸ್ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತರ ಮನೆತನದ ಮಕ್ಕಳಾಗಿದ್ದು, ಈ ವಿದ್ಯಾರ್ಥಿಗಳ ಪೋಷಕರು ತುಂಬಾ ಸಿರಿವಂತರಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಶ್ರೀಮಂತರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ದಾಸರಾಗಿ ಇಂತಹ ಖಾಯಿಲೆಗಳಿಗೆ ತುತ್ತಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications