400 Crore Robbery: ಕರ್ನಾಟಕ - ಮಹಾರಾಷ್ಟ್ರದ ಗಡಿ ಭಾಗದಲ್ಲಿ 400 ಕೋಟಿ ದರೋಡೆ: ಏನಿದು ಪ್ರಕರಣ, ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಳಗಾವಿ: ಕರ್ನಾಟಕ - ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿರುವ ಭಾರೀ ದರೋಡೆ ಪ್ರಕರಣವೊಂದು ಇದೀಗ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಬರೋಬ್ಬರಿ 400 ಕೋಟಿ ರೂಪಾಯಿ ಸಾಗಿಸುತ್ತಿದ್ದ ಕಂಟೇನರ್ ಹೈಜಾಕ್ ವಿಚಾರವು ಇದೀಗ ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಮಹಾರಾಷ್ಟ್ರ ಗಡಿ ಪ್ರದೇಶ ಚೋರ್ಲಾ ಘಾಟ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ದರೋಡೆ ನಡೆದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂಪಾಯಿ ಮೊತ್ತದ ಹಣವನ್ನು 2 ಕಂಟೇನರ್ಗಳಲ್ಲಿ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಅಕ್ರಮ ಹಣ ಸಾಗಾಟ ಮತ್ತು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗೋವಾ ದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂಪಾಯಿ ಸಾಗಿಸುತ್ತಿದ್ದ ಕಂಟೇನರನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ. 2025ರ ಅಕ್ಟೋಬರ್ 16 ರಂದು ನಡೆದ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಭಾರೀ ಮೊತ್ತದ ಹಣ ಇರುವ ಕಂಟೇನರ್‌ಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದು. ತನಿಖೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. ಹಣ ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸೇಟ್ ಎಂಬುವವರಿಗೆ ಸೇರಿದ್ದು ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ.
ಕರ್ನಾಟಕ -ಮಹಾರಾಷ್ಟ್ರ ಗಡಿಯಲ್ಲಿರುವ ಚೋರ್ಲಾ ಘಾಟ್‌ನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂದು ದೂರುದಾರರು ಹೇಳಿಕೊಂಡಿದ್ದಾರೆ.
ನಾಸಿಕ್ ನಿವಾಸಿ ಸಂದೀಪ್ ದತ್ತ ಪಾಟೀಲ್ ಎನ್ನುವವರು ಜನವರಿ 9 ರಂದು ಘೋಟಿ ಪೊಲೀಸರಿಗೆ ದೂರು ನೀಡಿದ್ದಾರೆ.ದೂರಿನಲ್ಲಿ ಅಕ್ಟೋಬರ್ 16, 2025 ರಂದು ವಿರಾಟ್ ಗಾಂಧಿ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದರು. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ 400 ಕೋಟಿ ರೂ.ಗಳ ದರೋಡೆಗೆ ಗಾಂಧಿ ಅವರನ್ನೇ ಹೊಣೆಗಾರರನ್ನಾಗಿ ಮಾಡಿದ್ದರು. ಅಕ್ಟೋಬರ್ 22 ರಂದು ಪಾಟೀಲ್ ಅವರನ್ನು ಮತ್ತೆ ಅಪಹರಿಸಲಾಯಿತು ಮತ್ತು ಹಣ ಸಾಗಿಸುವ ವಿವರಗಳನ್ನು ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು ಎಂದು ಹೇಳಲಾಗಿದೆ.
ಜೀವ ಬೆದರಿಕೆಯಿಂದ ದೂರು ನೀಡುವುದಕ್ಕೆ ವಿಳಂಬ ಮಾಡಲಾಯಿತು ಎಂದು ಹೇಳಿದ್ದಾರೆ. ನಾಸಿಕ್ ಪೊಲೀಸರಿಂದ ಕಂಟೇನರ್‌ಗಳ ಕುರಿತು ಪತ್ರವನ್ನು ಸ್ವೀಕರಿಸಿದ ನಂತರ, ಅವರು ತಮ್ಮ ಲಾಗ್ ಅನ್ನು ಪರಿಶೀಲಿಸಿದರು ಮತ್ತು ಅಕ್ಟೋಬರ್ 16 ರಂದು ಆ ಕಂಟೇನರ್‌ಗಳ ವಿವರವನ್ನು ಪರಿಶೀಲನೆ ಮಾಡಲಾಗಿದ್ದು, ಕರ್ನಾಟಕಕ್ಕೆ ಈ ಕಂಟೇನರ್‌ಗಳು ಪ್ರವೇಶಿಸಿವೆ ಎನ್ನುವುದನ್ನು ದೃಢಪಡಿಸಲಾಗಿದೆ. ಪ್ರಕರಣದ ವಿವರಗಳನ್ನು ಪಡೆಯಲು ನಾವು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ನೇತೃತ್ವದ ತಂಡವನ್ನು ರಚಿಸಿದ್ದೇವೆ. ಅಲ್ಲದೇ ಮರಾಠಿಯಲ್ಲಿ ಮಾತನಾಡಬಲ್ಲ ಇತರ ಮೂವರು ಸಿಬ್ಬಂದಿಯನ್ನು ಕಳುಹಿಸಿದ್ದೇವೆ ಎಂದು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ.
ಕಂಟೇನರ್ ಹೈಜಾಕ್ ಮಾಡಿದ ಮೇಲೆ ಕಿಶೋರ್ ಸೇಟ್ ಸ್ನೇಹಿತ ನಾಸಿಕ್ ಮೂಲದ ಸಂದೀಪ್ ಪಾಟೀಲ್ ಅವರನ್ನು ಗನ್ ಪಾಯಿಂಟ್‌ನಲ್ಲಿ ಅಪಹರಣ ಮಾಡಲಾಗಿತ್ತು. ಅಲ್ಲದೇ ಒಂದೂವರೆ ತಿಂಗಳ ಕಾಲ ಒತ್ತೆಯಾಳಾಗಿಸಿಕೊಂಡು ಸಂದೀಪ್‌ಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ, 400 ಕೋಟಿ ರೂಪಾಯಿ ಕೊಡದಿದ್ದರೆ ಜೀವ ತೆಗೆಯುತ್ತೇವೆಂದು ಸಂದೀಪ್‌ಗೆ ಕಿಶೋರ್ ಸಹಚರರು ಹಿಂಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ಪೊಲೀಸರಿಗೆ ಪತ್ರ
400 ಕೋಟಿ ರೂಪಾಯಿ ಮೊತ್ತದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರವು ಬೆಳಗಾವಿ ಎಸ್ಪಿ ರಾಮರಾಜನ್ ಅವರಿಗೆ ಪತ್ರ ಬರೆದಿದೆ. ಅಲ್ಲದೇ ಗೋವಾ ಪೊಲೀಸರ ಸಹಕಾರವನ್ನು ಮಹಾರಾಷ್ಟ್ರ ಸರ್ಕಾರ ಕೇಳಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಹಣ ಬಳಕೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲು ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಅವರು ಮಹಾರಾಷ್ಟ್ರದ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.












Click it and Unblock the Notifications