4 ಬಾರಿ ಸಿಎಂ, 6 ಬಾರಿ ಸಂಸದ; ಮಧ್ಯ ಪ್ರದೇಶದ 'ಮಾಮ' ಈಗ ಕೇಂದ್ರ ಸಚಿವ!
ನವದೆಹಲಿ, ಜೂನ್ 09; ಲೋಕಸಭೆ ಚುನಾವಣೆ 2024ರ ಬಳಿಕ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಭಾನುವಾರ ಸಂಜೆ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನರೇಂದ್ರ ಮೋದಿ ಮತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ (65) ನರೇಂದ್ರ ಮೋದಿ ಸಂಪುಟ ಸೇರಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಮಧ್ಯ ಪ್ರದೇಶದ ವಿಧಿಶ ಕ್ಷೇತ್ರದಲ್ಲಿ 11,16,460 ಮತಗಳನ್ನು ಪಡೆದು ಜಯಗಳಿಸಿದ ಶಿವರಾಜ್ ಸಿಂಗ್ ಚೌವ್ಹಾಣ್ ಕೇಂದ್ರ ಸಚಿವರಾಗಿದ್ದಾರೆ. 6 ಬಾರಿ ಸಂಸದರಾಗಿರುವ ಅವರು 4 ಬಾರಿ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಮಧ್ಯ ಪ್ರದೇಶದ 'ಮಾಮ': ಶಿವರಾಜ್ ಸಿಂಗ್ ಚೌವ್ಹಾಣ್ ಮಧ್ಯ ಪ್ರದೇಶದಲ್ಲಿ 'ಮಾಮ' ಎಂದೇ ಖ್ಯಾತಿಗಳಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಜಯಗಳಿಸಿದರೂ ಸಹ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಮಾಡಲಿಲ್ಲ.
ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದರೂ ಸಹ ಚುನಾವಣೆ ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಡಾ. ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಲಾಯಿತು. ಈಗ ಶಿವರಾಜ್ ಸಿಂಗ್ ಚೌವ್ಹಾಣ್ ಕೇಂದ್ರ ಸಚಿವರಾಗಿದ್ದಾರೆ.
ಮಾರ್ಚ್ 5, 1959ರಲ್ಲಿ ಜನಿಸಿದ ಶಿವರಾಜ್ ಸಿಂಗ್ ಚೌವ್ಹಾಣ್ ವಿದ್ಯಾರ್ಥಿ ಜೀವನದಿಂದಲೇ ಹೋರಾಟ ಆರಂಭಿಸಿದವರು. 13 ವರ್ಷವಿದ್ದಾಗ ಅವರು ಆರ್‌ಎಸ್‌ಎಸ್ ಮೂಲಕ ಬಿಜೆಪಿಯ ಸಂಪರ್ಕಕ್ಕೆ ಬಂದರು.
1990ರಲ್ಲಿ ಬುಧ್ನಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲ್ಲುವ ಮೂಲಕ ಚೌವ್ಹಾಣ್ ಶಾಸಕರಾದರು. ವಿಧಿಶ ಕ್ಷೇತ್ರದಲ್ಲಿ 1991ರಲ್ಲಿ ಗೆಲ್ಲುವ ಮೂಲಕ ಲೋಕಸಭೆ ಪ್ರವೇಶ ಮಾಡಿದರು. 1996ರ ಚುನಾವಣೆಯಲ್ಲಿ ಮತ್ತೆ ಗೆದ್ದು ಸಂಸತ್ ಪ್ರವೇಶ ಮಾಡಿದರು. ವಿವಿಧ ಸಚಿವಾಲಯ, ಮಧ್ಯ ಪ್ರದೇಶ ರಾಜ್ಯದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು.
1998ರಲ್ಲಿ 3ನೇ ಬಾರಿಗೆ ಸಂಸತ್ ಸದಸ್ಯರಾದರು. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. 2003ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು. 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು 5ನೇ ಬಾರಿಗೆ ಸಂಸತ್ ಪ್ರವೇಶ ಮಾಡಿದರು.
2005ರಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾದರು. 2006ರ ಉಪ ಚುನಾವಣೆಯಲ್ಲಿ ಬುಧ್ನಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಉಳಿಸಿಕೊಂಡರು. 2008ರಲ್ಲಿ ಮತ್ತೆ ಗೆದ್ದರು. 2ನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾದರು. 2013ರ ಚುನಾವಣೆಯಲ್ಲಿ ಮತ್ತೆ ಗೆದ್ದರು. 3ನೇ ಬಾರಿಗೆ ರಾಜ್ಯದ ಸಿಎಂ ಆದರು.
2018ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾಯಿತು. ಆದರೆ ರಾಜಕೀಯ ಬೆಳವಣಿಗೆ ಕಾರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಂಡ ಬಳಿಕ 2020ರಲ್ಲಿ ಮತ್ತೆ 4ನೇ ಅವಧಿಗೆ ಶಿವರಾಜ್ ಸಿಂಗ್ ಚೌವ್ಹಾಣ್ ರಾಜ್ಯದ ಮುಖ್ಯಮಂತ್ರಿಯಾದರು. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆದ್ದರೂ ಸಹ ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಯಾಗಲಿಲ್ಲ.
ಆಗಲೇ ಶಿವರಾಜ್ ಸಿಂಗ್ ಚೌವ್ಹಾಣ್‌ಗೆ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅಂತಹ ಯಾವುದೇ ಬೆಳವಣಿಗೆ ನಡೆಯಲಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಅವರು ಮೋದಿ ಸಂಪುಟ 3.0 ಸೇರಿದ್ದಾರೆ.












Click it and Unblock the Notifications