Kedarnath Landslide: ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಭೂಕುಸಿತ: 3 ಸಾವು, 8 ಮಂದಿಗೆ ಗಾಯ
ಡೆಹ್ರಾಡೂನ್, ಜುಲೈ. 21: ಇಂದು ಮುಂಜಾನೆ ನಡೆದ ದುರಂತ ಘಟನೆಯೊಂದರಲ್ಲಿ, ಕೇದಾರನಾಥ ಬಳಿಯ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಭಾನುವಾರ ಚಾರ್ ಧಾಮ್ ಯಾತ್ರೆಯ ವೇಳೆ ಕೇದಾರನಾಥ ಪಾದಚಾರಿ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ.
ಉತ್ತರಾಖಂಡದ ಕೇದಾರನಾಥದಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಮಹಾರಾಷ್ಟ್ರದ ಇಬ್ಬರು ಪ್ರವಾಸಿಗರು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಹೆಸರುವಾಸಿಯಾದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಪಟ್ಟಣದಲ್ಲಿ ಗೌರಿಕುಂಡ್ ಮತ್ತು ಚಿರ್ಬಸಾ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.

ಭಾರೀ ಮಳೆಯಿಂದ ಉಂಟಾದ ನಿರಂತರ ಭೂಕುಸಿತದಿಂದಾಗಿ ಯಾತ್ರಾರ್ಥಿಗಳು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ. ಗಾಯಾಳು ಯಾತ್ರಾರ್ಥಿಗಳನ್ನು ಅವಶೇಷಗಳಿಂದ ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದಲ್ಲಿ ಮೃತರನ್ನು ನಾಗ್ಪುರದ ಕಿಶೋರ್ ಅರುಣ್ ಪರಾಟೆ (31), ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಸುನೀಲ್ ಮಹಾದೇವ್ ಕಾಳೆ (24) ಮತ್ತು ರುದ್ರಪ್ರಯಾಗದ ತಿಲವಾಡ ನಿವಾಸಿ ಅನುರಾಗ್ ಬಿಷ್ತ್ ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗ್ಗೆ 7:30 ರ ಸುಮಾರಿಗೆ ತುರ್ತು ನಿಯಂತ್ರಣ ಕೊಠಡಿಗೆ ಕೇದಾರನಾಥ ಯಾತ್ರೆ ಮಾರ್ಗ, ಚಿರ್ಬಸಾ ಬಳಿ ದುರಂತ ನಡೆದ ಬಗ್ಗೆ ವರದಿ ಬಂದಿದ್ದು, ಕೆಲವು ಯಾತ್ರಾರ್ಥಿಗಳು ಬೆಟ್ಟದ ತುದಿಯಿಂದ ಬಿದ್ದ ಮಣ್ಣು ಮತ್ತು ಬಂಡೆಗಳ ಅಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಮಾಹಿತಿಯ ಮೇರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

"ಘಟನಾ ಸ್ಥಳಕ್ಕೆ ಆಗಮಿಸಿದ ಎಸ್‌ಡಿಆರ್‌ಎಫ್ ತಂಡವು ಧಾವಿಸಿ ತಕ್ಷಣವೇ ಗಾಯಗೊಂಡ ಎಂಟು ವ್ಯಕ್ತಿಗಳನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ಸಾಗಿಸಿತು. ದುರದೃಷ್ಟವಶಾತ್, ಸ್ಥಳದಲ್ಲಿ ಮೂವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅವರ ಮೃತದೇಹಗಳನ್ನು ಜಿಲ್ಲೆಗೆ ಹಸ್ತಾಂತರಿಸಲಾಗಿದೆ" ಎಂದು ಎಸ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವ ಇತರ ಯಾತ್ರಾರ್ಥಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ದೃಷ್ಟಿಯಿಂದ ಯಾತ್ರೆಯ ಮಾರ್ಗವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications