Tirumala Tirupati: 3,500 ತಿರುಮಲ ಉದ್ಯೋಗಿಗಳಿಗೆ ಟಿಟಿಡಿಯಿಂದ ಭೂ ಪ್ರಮಾಣ ಪತ್ರ- ಯಾವಾಗ, ಮಾಹಿತಿ
ತಿರುಮಲ, ಡಿಸೆಂಬರ್ 27: ಟಿಟಿಡಿ ಎಲ್ಲಾ ನೌಕರರಿಗೆ ವಿವಿಧ ಹಂತಗಳಲ್ಲಿ ಮನೆ ನಿವೇಶನದ ಪಟ್ಟಾ(ಭೂ ಹಿಡುವಳಿ ಪ್ರಮಾಣ ಪತ್ರ)ಗಳನ್ನು ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಬೋರ್ಡ್ ನಿರ್ಧರಿಸಿದೆ.
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ದೇವಾಲಯದ ಆಡಳಿತ ಮಂಡಳಿ ಒಟ್ಟು 3,518 ನೌಕರರಿಗೆ ಡಿಸೆಂಬರ್ 28 ರಂದು ನಿವೇಶನದ ಪಟ್ಟಾಗಳನ್ನು ವಿತರಿಸಲಿದೆ. ಹಾಗೂ 2024ರ ಮೊದಲ ವಾರದಲ್ಲಿ ಎರಡನೇ ಹಂತದಲ್ಲಿ, ಸುಮಾರು 1,500 ಉದ್ಯೋಗಿಗಳಿಗೆ ಪಟ್ಟಾಗಳನ್ನು ನೀಡಲಿದೆ.

ಈ ಬಗ್ಗೆ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಾಹಿತಿ ನೀಡಿದ್ದಾರೆ. ಸ್ಯಾಚುರೇಶನ್ ಸಿಸ್ಟಮ್ ಮೂಲಕ ಟಿಟಿಡಿಯ ನಿವೃತ್ತ ಉದ್ಯೋಗಿಗಳಿಗೂ ಇದರ ಪ್ರಯೋಜನಗಳು ಸಿಗಲಿದೆ. ತಿರುಪತಿ ಜಿಲ್ಲಾಧಿಕಾರಿ ಆದೇಶದಂತೆ ಯೆರ್ಪೇಡು ಬಳಿಯ ಪಗಲಿಯಲ್ಲಿ 350 ಎಕರೆ ಭೂಮಿಯನ್ನು ಈ ಉದ್ದೇಶಕ್ಕಾಗಿ ಮೀಸಲಿಡಲಾಗಿದ್ದು, ಇದರ ಆರಂಭಿಕ ವೆಚ್ಚ 62 ಕೋಟಿ ರೂಪಾಯಿಗಳನ್ನು ಟಿಟಿಡಿ ಭರಿಸಿದೆ. ಆದರೆ ನಿವೇಶನಗಳ ಹಂಚಿಕೆಯ ನಂತರ ಟ್ರಸ್ಟ್ ಬೋರ್ಡ್ ನೌಕರರಿಂದ ಈ ವೆಚ್ಚವನ್ನು ವಾಪಸ್ ಪಡೆಯುವ ನಿರೀಕ್ಷೆಯಲ್ಲಿದೆ.
ಹೊಸ ವರ್ಷಕ್ಕೆ ಗುತ್ತಿಗೆ ಕಾರ್ಮಿಕರಿಗೂ ಕೂಡ ಗುಡ್ ನ್ಯೂಸ್ ನೀಡಲು ಟಿಟಿಡಿ ಮುಂದಾಗಿದ್ದು, ಟ್ರಸ್ಟ್ ಬೋರ್ಡ್ ಮಾಸಿಕ ವೇತನವನ್ನು ಹೆಚ್ಚಿಸಲು ನಿರ್ಧರಿಸಿದೆ. ನುರಿತ ಕೆಲಸಗಾರರಿಗೆ 15,000 ರೂ.ನಿಂದ 18,000 ರೂ.ಗೆ, ಅರೆ ಕುಶಲ ಕೆಲಸಗಾರರಿಗೆ 12,000 ರೂ.ನಿಂದ 15,000 ರೂ.ಗೆ ಮತ್ತು ಕೌಶಲ್ಯರಹಿತ ಕೆಲಸಗಾರರಿಗೆ 10,311 ರಿಂದ 15,000 ರೂ.ಗೆ ಮಾಸಿಕ ವೇತನ ಏರಿಕೆಯಾಗಲಿದೆ. ಇನ್ನು ಕಲ್ಯಾಣ ಕಟ್ಟೆಯಲ್ಲಿ ಕೆಲಸ ಮಾಡುವ ಕ್ಷೌರಿಕರಿಗೆ ಈಗ ತಲಾ 2,000 ರೂ ಮಾಸಿಕ ವೇತನ ನೀಡಲು ಟ್ರಸ್ಟ್ ಬೋರ್ಡ್ ಮುಂದಾಗಿದೆ.
ಲಡ್ಡುಗಳನ್ನು ತಯಾರಿಸುವ ಗುತ್ತಿಗೆ ಕಾರ್ಮಿಕರಿಗೂ ಕೂಡ 10,000 ರೂ ಮಾಸಿಕ ವೇತನ ನಿಗದಿ ಮಾಡಲಾಗಿದೆ. ಅಲ್ಲದೇ ಇದೀಗ ಪಲ್ಲಕ್ಕಿಯನ್ನು ಹೊರುವವರನ್ನು ಅಧಿಕೃತವಾಗಿ ಕುಶಲ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಅವರಿಗೂ ಮಾಸಿಕ ವೇತನ ಸಿಗಲಿದೆ ಎಂದು ವರದಿಯಾಗಿದೆ.

ಇನ್ನು ಟ್ರಸ್ಟ್ ಬೋರ್ಡ್ ಧಾರ್ಮಿಕ ಮುಖ್ಯಸ್ಥರ ಕಲ್ಯಾಣಕ್ಕಾಗಿ ಹಣವನ್ನು ಮಂಜೂರು ಮಾಡಿದ್ದು, ಪೆದ್ದ ಜಿಯ್ಯರ್ ಮಠಗೆ ವಾರ್ಷಿಕವಾಗಿ ರೂ 60 ಲಕ್ಷ ಮತ್ತು ಚಿನ್ನಾ ಜಿಯ್ಯರ್‌ಗೆ ವಾರ್ಷಿಕ ರೂ 40 ಲಕ್ಷ ಮಂಜೂರು ಮಾಡಿದೆ. ಇದಲ್ಲದೆ, ಟಿಟಿಡಿ ಫೆಬ್ರವರಿಯಲ್ಲಿ ಆಯೋಜಿಸಿರುವ ಅಖಿಲ ಭಾರತ ಧಾರ್ಮಿಕ ಮುಖ್ಯಸ್ಥರ ಸಮಾವೇಶಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹೀಗಾಗಿ ದೇವಾಲಯದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಟ್ರಸ್ಟ್ ಬೋರ್ಡ್ ವಿವಿಧ ಟೆಂಡರ್‌ಗಳನ್ನು ಅನುಮೋದಿಸಿದೆ.
ಇವುಗಳಲ್ಲಿ 6.25 ಕೋಟಿ ರೂಗಳಲ್ಲಿ ಗೋದಾಮು ನಿರ್ಮಾಣ, ಪ್ರವಾಸಿ ಬಸ್ ನಿಲ್ದಾಣದ ನವೀಕರಣ ಹಾಗೂ ಅಡುಗೆ ಕೋಣೆ ನಿರ್ಮಾಣ. 7.31 ಕೋಟಿ ರೂಗಳಲ್ಲಿ ಫುಟ್‌ಪಾತ್‌ಗಳು, ಅಲಿಪಿರಿಯಲ್ಲಿ ಪಾರ್ಕಿಂಗ್ ಬೇ ಮತ್ತು ಇತರ ಸೌಲಭ್ಯಗಳ ನಿರ್ಮಾಣ, 2.87 ಕೋಟಿ ರೂಪಾಯಿ ಬಜೆಟ್‌ನಲ್ಲಿ ಪೊಲೀಸ್ ಕ್ವಾರ್ಟರ್ಸ್ ನವೀಕರಣ ಮತ್ತು ಫೇಸ್ ಲಿಫ್ಟ್ ಕಾಮಗಾರಿಗಳು, ವರಾಹ ಸ್ವಾಮಿ ಅತಿಥಿ ಗೃಹದಿಂದ ಚತುಷ್ಪಥ ರಸ್ತೆಗೆ 6.32 ಕೋಟಿ ಅನುಮೋದನೆ ನೀಡಲಾಗಿದೆ.
ವಕುಳಮಠ ದೇವಸ್ಥಾನದಿಂದ ಚೆರ್ಲೋಪಲ್ಲಿ ವೃತ್ತದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮತ್ತು ಸಂಬಂಧಿತ ಕಾಮಗಾರಿಗಳಿಗೆ 17.29 ಕೋಟಿ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ. ಕಾಂಪೌಂಡ್ ಗೋಡೆಗಳು ಮತ್ತು ನೆಲ ನಿರ್ಮಾಣಕ್ಕಾಗಿ ಟಿಟಿಡಿ 2 ಕೋಟಿ ರೂಪಾಯಿ ಟೆಂಡರ್‌ಅನ್ನು ಸಹ ಮಂಜೂರು ಮಾಡಿದೆ. ಇನ್ನು ಕೊನೆಯಲ್ಲಿ ಗೋಪೂಜಾ ಹೋಮದಲ್ಲಿ ಭಾಗವಹಿಸುವ ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಟ್ರಸ್ಟ್ ಬೋರ್ಡ್ ನಿರ್ಧರಿಸಿದೆ.












Click it and Unblock the Notifications