ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 23 ವರ್ಷದ ಯುವತಿಗೆ ಹಾರ್ಟ್ ಅಟ್ಯಾಕ್
ಇತ್ತೀಚೆಗೆ ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಮೊದಲೆಲ್ಲ ವಯಸ್ಸಾದವರಲ್ಲಿ ಅಲ್ಲೋ ಇಲ್ಲೋ ಎನ್ನುವಂತೆ ಹೃದಯಾಘಾತ ಸಂಭವಿಸುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಚಿಕ್ಕ ವಯಸ್ಸಿನವರು ಕೂಡ ಹೃದಯಾಘಾತದಿಂದ ಪ್ರಾಣ ಬಿಡುತ್ತಿದ್ದಾರೆ. ಇಂತದ್ದೇ ಘಟನೆ ಮತ್ತೊಂದು ಬೆಳಕಿಗೆ ಬಂದಿದ್ದು, ಮದುವೆಮನೆಯಲ್ಲಿ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ಯುವತಿಗೆ ಹಾರ್ಟ್ ಅಟ್ಯಾಕ್ ಆಗಿದೆ.
ಮಧ್ಯಪ್ರದೇಶದಲ್ಲಿ ಈ ದುರಂತ ನಡೆದಿದೆ. ಇಂದೋರ್‌ನ ಪರಿಣಿತಾ ಜೈನ್ ಎನ್ನುವ 23 ವರ್ಷದ ಯುವತಿ ವಿದಿಶಾ ಜಿಲ್ಲೆಯ ರೆಸಾರ್ಟ್‌ನಲ್ಲಿ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವಾಗ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಪರಿಣಿತಾ ತನ್ನ ಸೋದರ ಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ವಿಧಿಶಾಗೆ ತೆರಳಿದ್ದರು.

ಶನಿವಾರ ರಾತ್ರಿ ನಡೆದ ಹಳದಿ ಸಮಾರಂಭದಲ್ಲಿ ಪರಿಣಿತಾ ಅವರು ವೇದಿಕೆ ಮೇಲೆ ಡಾನ್ಸ್ ಮಾಡುತ್ತಿದ್ದರು. ಇದನ್ನು ಅಲ್ಲಿದ್ದವರು ರೆಕಾರ್ಡ್ ಮಾಡಿಕೊಂಡಿದ್ದರು. ನೋಡನೋಡುತ್ತಿದ್ದಂತೆ ಯುವತಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡುತ್ತಲೇ ಅವರ ಪ್ರಾಣಪಕ್ಷಿ ವಿಧಿಯಾಟಕ್ಕೆ ಹಾರಿ ಹೋಗಿದೆ.
ಕೂಡಲೇ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದರು. ಎಂಬಿಎ ಪದವೀಧರೆಯಾದ ಪರಿಣಿತಾ ಅವರು ತಮ್ಮ ಪೋಷಕರೊಂದಿಗೆ ಇಂದೋರ್‌ನ ದಕ್ಷಿಣ ತುಕೋಗಂಜ್‌ನಲ್ಲಿ ವಾಸಿಸುತ್ತಿದ್ದರು. ಆಕೆಯ ಕಿರಿಯ ಸಹೋದರ ಕೂಡ 12ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವತಿ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಹಂಚಿಕೊಂಡಿರುವ ಹಲವರು ಜೀವನವು ನಿಜವಾಗಿಯೂ ಅನಿರೀಕ್ಷಿತವಾಗಿದೆ. ಈ 23 ವರ್ಷದ ಹುಡುಗಿ ತನ್ನ ಸಹೋದರಿಯ ಮದುವೆಯಲ್ಲಿ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾಕೆ ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೃದಯಾಘಾತದಿಂದ 23 ವರ್ಷ ವಯಸ್ಸಿನ ಯುವತಿಯ ಹಠಾತ್ ಸಾವು ಹಲವರನ್ನು ಬೆಚ್ಚಿಬೀಳಿಸಿದೆ. ಮೊದಲೆಲ್ಲ ಆರೋಗ್ಯ ಫಿಟ್ ಇಲ್ಲದವರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎನ್ನುವ ಮಾತಿತ್ತು. ಈಗ ಸಣ್ಣಗೆ ಫಿಟ್ ಆಗಿರುವವರೂ ಕುಸಿದು ಸಾವನ್ನಪ್ಪುತ್ತಿದ್ದಾರೆ ಎಂದರೆ ನಿಜಕ್ಕೂ ಭಯವಾಗುತ್ತಿದೆ ಎಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಅನೇಕರು ಕೋವಿಡ್-19 ಸಾಂಕ್ರಾಮಿಕದ ನಂತರ ಇಂತಹ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಚರ್ಚೆ ಹುಟ್ಟುಹಾಕಿದ್ದಾರೆ. ಕೆಲವರು ಕುಟುಂಬದ ಇತಿಹಾಸ ಮತ್ತು ಜೀವನಶೈಲಿಯ ಅಂಶಗಳು ಹೃದಯದ ಆರೋಗ್ಯದ ಹಿಂದೆ ಪ್ರಮುಖ ಪಾತ್ರ ವಹಿಸುತ್ತವೆ ಎಂದೂ ಹೇಳಿದ್ದಾರೆ.
2024ರ ಅಕ್ಟೋಬರ್‌ನಲ್ಲಿ ಅಗರ್-ಮಾಲ್ವಾ ಜಿಲ್ಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ 15 ವರ್ಷದ ಹುಡುಗ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದ. ಮಧ್ಯಪ್ರದೇಶದ ಇಂದೋರ್‌ನಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಯೋಗ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಹೃದಯಾಘಾತದಿಂದ ವೇದಿಕೆಯ ಮೇಲೆ ಕುಸಿದುಬಿದ್ದು ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ ಮೀರತ್‌ನಲ್ಲಿ 18 ವರ್ಷದ ಯುವತಿಯೊಬ್ಬಳು ತನ್ನ ಸಹೋದರಿಯ ವಿವಾಹಪೂರ್ವ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದಾಗ ಕುಸಿದುಬಿದ್ದು ನಂತರ ಸಾವನ್ನಪ್ಪಿದಳು. ಇಂತದ್ದೇ ಘಟನೆ ಈಗ ಮತ್ತೊಂದು ನಡೆದಿರುವುದು ಎಲ್ಲರಲ್ಲಿ ಆತಂಕ ಹುಟ್ಟಿಸಿದೆ.












Click it and Unblock the Notifications