22,000 ಕೋಟಿ ರೂ ವಂಚನೆ ಕೇಸ್: ಎಬಿಜಿ ಶಿಪ್‌ಯಾರ್ಡ್‌ನ 26 ಕಂಪನಿ ಮೇಲೆ ಇಡಿ ದಾಳಿ
ನವದೆಹಲಿ, ಏಪ್ರಿಲ್ 27: ದೇಶದ 28 ಬ್ಯಾಂಕ್‌ಗಳ ಒಕ್ಕೂಟಕ್ಕೆ 22,842 ಕೋಟಿ ಮೊತ್ತದ ವಂಚನೆ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಸಂಬಂಧಿಸಿದ 26 ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಎನ್ನುವುದು ದೇಶದ ಅತಿದೊಡ್ಡ ಖಾಸಗಿ ಹಡಗು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮುಂಬೈ, ಪುಣೆ, ಸೂರತ್ ಮತ್ತು ಇತರ ಸ್ಥಳಗಳಲ್ಲಿ ಎಬಿಜಿ ಶಿಪ್‌ಯಾರ್ಡ್, ಅದರ ಸಹೋದರ ಕಂಪನಿಗಳು ಮತ್ತು ಕಾರ್ಯನಿರ್ವಾಹಕರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್) ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ ತಿಂಗಳಿನಲ್ಲೇ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ನಕಲಿ ಕಂಪನಿಗಳಿಗೆ ಹಣ ವರ್ಗಾವಣೆಯ ಆರೋಪ
ಭಾರತದಲ್ಲಿ 100ಕ್ಕೂ ಹೆಚ್ಚು ಶೆಲ್(ನಕಲಿ) ಕಂಪನಿಗಳ ಮೂಲಕ ಬ್ಯಾಂಕ್‌ಗಳಿಂದ ಅಪಾರ ಪ್ರಮಾಣದ ಸಾಲವನ್ನು ಪಡೆದುಕೊಳ್ಳಲಾಗಿತ್ತು. ಹೀಗೆ ಪಡೆದುಕೊಂಡ ಸಾಲವನ್ನು ವಿದೇಶಗಳಲ್ಲಿರುವ ಮತ್ತು ದೇಶದಲ್ಲಿರುವ ಇತರೆ ಸಹೋದರ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಎಬಿಜಿಯ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರವಾಲ್ ಮತ್ತು ಕಂಪನಿಯ ಇತರ ನಿರ್ದೇಶಕರ ಹೆಸರನ್ನೂ ಸೇರಿಸಲಾಗಿದೆ.

ಎಬಿಜಿ ಬ್ಯಾಂಕ್ ಸಾಲದ ಕುರಿತು ಮಾಹಿತಿ
ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಹಲವು ಕಂಪನಿಗಳಿಂದ ಸಾಲವನ್ನು ಪಡೆದುಕೊಂಡಿದೆ. ಐಸಿಐಸಿಐ ಬ್ಯಾಂಕ್ ನೇತೃತ್ವದ 28 ಬ್ಯಾಂಕ್‌ಗಳ ಒಕ್ಕೂಟಕ್ಕೆ ಒಟ್ಟು 22,842 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದು ಸಿಬಿಐ ಆರೋಪಿಸಿದೆ. ಐಸಿಐಸಿಐ ಅತಿ ಹೆಚ್ಚು ಸಾಲ ನೀಡಿದ್ದು, ಅದರಿಂದ 7,089 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿತ್ತು. ಐಡಿಬಿಐ ಬ್ಯಾಂಕ್ 3,639 ಕೋಟಿ ರೂಪಾಯಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,925 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಬರೋಡಾ 1,614 ಕೋಟಿ ರೂಪಾಯಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ 1,244 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡಿತ್ತು ಎಂದು ತಿಳಿದು ಬಂದಿದೆ.

ಸಾಲ ಪಾವತಿ ವೇಳೆ ಕೇಂದ್ರದಲ್ಲಿ ಯುಪಿಎ ಸರ್ಕಾರ
ಎಬಿಜಿ ಶಿಪ್‌ಯಾರ್ಡ್‌ನ ಖಾತೆಯಲ್ಲಿನ ಹೆಚ್ಚಿನ ಪಾವತಿಗಳು 2005 ಮತ್ತು 2012 ರ ನಡುವೆ ನಡೆದಿವೆ. ಸಾಲದ ಖಾತೆಯು ನವೆಂಬರ್ 30, 2013 ರಂದು ಅನುತ್ಪಾದಕ ಆಸ್ತಿಯಾಗಿ (ಎನ್‌ಪಿಎ) ಬದಲಾಯಿತು ಎಂದು ಫೆಬ್ರವರಿಯಲ್ಲಿ ಸಿಬಿಐ ಹೇಳಿದೆ. 2004 ಮತ್ತು 2014ರ ನಡುವೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರ ಅಧಿಕಾರದಲ್ಲಿತ್ತು. ಸಿಬಿಐ ಕೂಡ ಫೆಬ್ರವರಿ 12ರಂದು ವಿವಿಧ ನಗರಗಳಲ್ಲಿ ಎಬಿಜಿ ಕಂಪನಿಗಳ ಮೇಲೆ ದಾಳಿ ನಡೆಸಿತ್ತು.
ಕಳೆದ 2018 ರಲ್ಲಿ EY ನಡೆಸಿದ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಏಪ್ರಿಲ್ 2012 ಮತ್ತು ಜುಲೈ 2017ರ ನಡುವೆ ಆರೋಪಿಗಳು ಅಕ್ರಮ ಹಣ ವರ್ಗಾವಣೆ, ಪಿತೂರಿ, ಹಣ ದುರುಪಯೋಗ ಮತ್ತು ನಿಯಮ ಉಲ್ಲಂಘನೆ, ಕ್ರಿಮಿನಲ್ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.

ಎಬಿಜಿ ಶಿಪ್‌ಯಾರ್ಡ್ ಕಂಪನಿಯ ಬಗ್ಗೆ ತಿಳಿಯಿರಿ
ಎಬಿಜಿ ಶಿಪ್‌ಯಾರ್ಡ್ ಎಬಿಜಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿಸಿಕೊಂಡಿದೆ. ಗುಜರಾತಿನ ದಹೇಜ್ ಮತ್ತು ಸೂರತ್‌ನಲ್ಲಿ ಈ ಕಂಪನಿ ಹಡಗು ಕಟ್ಟೆಗಳಿವೆ. "ಕಳೆದ ಏಪ್ರಿಲ್ 2019 ರಿಂದ ಮಾರ್ಚ್ 2020ರ ನಡುವೆ ಎಬಿಜಿ ಶಿಪ್‌ಯಾರ್ಡ್‌ನ ಖಾತೆಗಳಿಂದ ವಂಚನೆ ಎಂದು ಒಕ್ಕೂಟದ ವಿವಿಧ ಬ್ಯಾಂಕ್‌ಗಳು ಘೋಷಿಸಿವೆ. ಎಬಿಜಿ ಶಿಪ್‌ಯಾರ್ಡ್‌ನಿಂದ ಅದರ ಸಂಬಂಧಿತ ಖಾತೆಗಳಿಗೆ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದ್ದು ಖಾತೆಯಲ್ಲಿ ನಮೂದಾಗಿದೆ," ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿತ್ತು.












Click it and Unblock the Notifications