2000 Rs Note Exchange: 2,000 ರೂ ಬದಲಾಯಿಸಿಕೊಳ್ಳಲು ಮತ್ತೊಂದು ಅವಕಾಶ: ಹೀಗೆ ಮಾಡಿದ್ರೆ ನೇರವಾಗಿ ಹಣ ಕ್ರೆಡಿಟ್
2000 Rs Note Exchange: ನವದೆಹಲಿ, ನವೆಂಬರ್ 02: 2016ರಲ್ಲಿ ಹಳೆಯ 500 ಹಾಗೂ 1,000 ನೋಟು ಬ್ಯಾನ್ ಬಳಿಕ ಚಲಾವಣೆಗೆ ಬಂದ 2000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಎರಡು-ಮೂರು ವರ್ಷಗಳಲ್ಲಿ ಮುದ್ರಣ ಮಾಡುವುದನ್ನು ನಿಲ್ಲಿಸಲಾಗಿತ್ತು. ಈ ವರ್ಷದ ಮೇ ತಿಂಗಳಲ್ಲಿ ದೇಶದ ಜನರಿಗೆ ಏಕಾಏಕಿ ಶಾಕ್ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿತ್ತು.
2023 ಸೆಪ್ಟೆಂಬರ್ 30 ರೊಳಗೆ 2,000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ದೇಶದ ಜನರಿಗೆ ತಿಳಿಸಲಾಗಿತ್ತು. ಮತ್ತೆ ಅವಕಾಶ ವಿಸ್ತರಿಸಿದ್ದ ಆರ್‌ಬಿಐ ಮೇ 23ರಿಂದ ಅಕ್ಟೋಬರ್ 15 ರವರೆಗೆ ಸಮೀಪದ ಬ್ಯಾಂಕ್‌ಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಿತ್ತು. ಆದರೆ ಒಂದು ಬಾರಿಗೆ 20 ಸಾವಿರ ರೂಪಾಯಿ ಮಾತ್ರ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವ ಷರತ್ತನ್ನು ಜೊತೆಯಲ್ಲೇ ಹಾಕಿತ್ತು.

ಡಿಜಿಟಲ್ ಪೇಮೆಂಟ್‌ಗಳಿಂದ ಈ ಹಿಂದೆಯೇ ಮಾರುಕಟ್ಟೆಯಲ್ಲಿ ಕಣ್ಮರೆಯಾಗುತ್ತಿದ್ದ 2,000 ರೂ. ಮುಖಬೆಲೆಯ ನೋಟುಗಳನ್ನು ಉಳ್ಳವರು ಸಮೀಪದ ಬ್ಯಾಂಕ್‌ಗೆ ಹೋಗಿ ವಿನಿಮಯ ಮಾಡಿಕೊಂಡಿದ್ದರು. ಆದರೂ ಕೆಲವರಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳಿದ್ದವು. ಹೀಗಾಗಿ ನೋಟು ವಿನಿಮಯದ ಅವಧಿ ಮುಗಿದು ಹದಿನೈದು ದಿನ ಕಳೆದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ಮತ್ತೊಂದು ಅವಕಾಶ ನೀಡಿದೆ.
ಈ ಹಿಂದೆ ನೀಡಿದ ಅವಧಿಯಲ್ಲಿ 2,000 ರೂ. ನೋಟುಗಳನ್ನು ಬದಲಾಯಿಸಲು ಸಾಧ್ಯವಾಗದ ಜನರಿಗೆ ಆರ್‌ಬಿಐ ಹೆಚ್ಚಿನ ಸಮಯಾವಕಾಶ ನೀಡಿದ್ದು, ಜನರು ಈಗ ತಮ್ಮಲ್ಲಿ ಇದ್ದ ನೋಟುಗಳನ್ನು ಕೇಂದ್ರೀಯ ಬ್ಯಾಂಕ್‌ನ ನಿರ್ದಿಷ್ಟ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಒಂದು ವೇಳೆ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗಳಿಂದ ದೂರವವರು ಪೋಸ್ಟ್ ಅಂದರೆ ಅಂಚೆ ಕಚೇರಿಯ ಮೂಲಕ ನೋಟುಗಳನ್ನು ಕಳುಹಿಸಬಹುದಾಗಿದೆ.
ಈ ಬಗ್ಗೆ ಆರ್‌ಬಿಐ ಪ್ರಾದೇಶಿಕ ನಿರ್ದೇಶಕ ರೋಹಿತ್ ಪಿ ದಾಸ್ ಮಾಹಿತಿ ನೀಡಿದ್ದು, " ಗ್ರಾಹಕರು 2,000 ರೂಪಾಯಿ ನೋಟುಗಳನ್ನು ಪೋಸ್ಟ್ ಮಾಡಿ ಖಾತೆಯಲ್ಲಿ ನೇರ ಕ್ರೆಡಿಟ್ ಮಾಡಿಕೊಳ್ಳಲು ಆರ್‌ಬಿಐಗೆ ಜನರಿಗೆ ನೆರವಾಗುತ್ತಿದೆ. ಈ ಮೂಲಕ ಜನರು ನೋಟು ವಿನಿಮಯ ಮಾಡಿಕೊಳ್ಳಲು ನಿರ್ದಿಷ್ಟ ಶಾಖೆಗಳಿಗೆ ತೆರಳುವ ಅಥವಾ ಅಲ್ಲಿ ಸರದಿಯಲ್ಲಿ ನಿಲ್ಲುವ ಸಮಸ್ಯೆಗಳು ದೂರವಾಗುತ್ತದೆ" ಎಂದು ತಿಳಿಸಿದ್ದಾರೆ.

ಜನರು ತಮ್ಮ ಬ್ಯಾಂಕ್ ಮಾಹಿತಿಯನ್ನು ವಿವರವಾಗಿ ನೀಡಿ ನೋಟುಗಳನ್ನು ಅಂಚೆ ಮೂಲಕ ಕಳುಹಿಸಿ ನೇರವಾಗಿ ತಮ್ಮ ಖಾತೆಗೆ ಹಣ ಜಮಾ ಮಾಡಿಕೊಳ್ಳಬಹುದಾಗಿದೆ. ಆರ್‌ಬಿಐ ಟ್ರಿಪಲ್ ಲಾಲಾಕ್ ರೆಸೆಪ್ಟಾಕಲ್ ಎನ್ನುವ ಅವಕಾಶವನ್ನು ಆರ್‌ಬಿಐ ಜನರಿಗೆ ನೀಡುತ್ತಿದೆ. 2,000 ರೂಪಾಯಿ ನೋಟು ವಿನಿಮಯ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲು ಬಯಸಿದರೆ ಅದಕ್ಕೆ ಆರ್‌ಬಿಐ ಪ್ರತ್ಯೇಕವಾದ ಅವಕಾಶವನ್ನು ಕೂಡಾ ನೀಡುತ್ತಿದೆ. ನೀವು ಟ್ರಿಪಲ್ ಲಾಕ್ ರೆಸೆಪ್ಟಾಕಲ್ ಅಥವಾ ಟಿಎಲ್‌ಆರ್ ಫಾರ್ಮ್ ಅನ್ನು ಭರ್ತಿ ಮಾಡಿ ಅವಕಾಶ ಪಡೆದುಕೊಳ್ಳಬಹುದಾಗಿದೆ.
2,000 ರೂಪಾಯಿ ನೋಟುಗಳನ್ನು ಆರ್‌ಬಿಐನ ಪ್ರಾದೇಶಿಕ ಕಚೇರಿಗಳಿಗೆ ಭೇಟಿ ನೀಡಿ ಸಹ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ , ಪಾಟ್ನಾ ಮತ್ತು ತಿರುವನಂತಪುರಂನಲ್ಲಿರುವ ಆರ್‌ಬಿಐ ಶಾಖೆಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕಕೊಳ್ಳಬಹುದು ಅಥವಾ ಠೇವಣಿ ಇಡಬಹುದಾಗಿದೆ.












Click it and Unblock the Notifications