Vande Bharat Express: ಕೇರಳಕ್ಕೆ ಬಂತು 20 ಬೋಗಿ ರೈಲು, ಕರ್ನಾಟಕಕ್ಕೂ ಅನುಕೂಲ
ತಿರುವನಂತಪುರಂ, ಜನವರಿ 04: ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ ಕೇರಳಕ್ಕೆ 20 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬಂದು ತಲುಪಿದೆ. ಹೊಸದಾದ ಕೇಸರಿ ಬಣ್ಣದ ವಂದೇ ಭಾರತ್ ರೈಲು 1,440 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ಹೊಂದಿರುವ ಮಾರ್ಗದಲ್ಲಿ ಈ ರೈಲು ಸಂಚಾರವನ್ನು ನಡೆಸಲಿದ್ದು, ಕರ್ನಾಟಕದ ಜನರಿಗೆ ಸಹ ಅನುಕೂಲವಾಗಲಿದೆ.
ತಿರುವನಂತಪುರಂನ ಉತ್ತರದಲ್ಲಿರುವ ಕೊಚುವೇಲಿ ರೈಲು ನಿಲ್ದಾಣಕ್ಕೆ 20 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಮಿಸಿದೆ. ಚೆನ್ನೈನ ಇಂಜಿನಿಯರ್‌ಗಳ ತಂಡ ಪರಿಶೀಲನೆ ನಡೆಸಿದ ಬಳಿಕ ರೈಲು ನಂಬರ್ 20634/ 20633 ಆಗಿ ಈ ರೈಲುಗಳು ಸಂಚಾರವನ್ನು ಆರಂಭಿಸಲಿವೆ.

ತಿರುವನಂತಪುರಂ- ಕಾಸರಗೋಡು ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದೆ. ಇಷ್ಟು ದಿನ ಈ ಮಾರ್ಗದಲ್ಲಿ 16 ಬೋಗಿಯ ರೈಲು ಸಂಚಾರ ನಡೆಸುತ್ತಿತ್ತು. 1,128 ಸೀಟುಗಳ ಸಾಮರ್ಥ್ಯವನ್ನು ಅದು ಹೊಂದಿತ್ತು. 20 ಬೋಗಿಯ ರೈಲು 18 ಚೇರ್ ಕಾರ್, 2 ಎಕ್ಸಿಕ್ಯುಟಿವ್ ಕ್ಲಾಸ್ ಸೇರಿ 1,440 ಸೀಟುಗಳನ್ನು ಹೊಂದಿದೆ.
ಅತ್ಯಂತ ಬೇಡಿಕೆಯ ಮಾರ್ಗ: ದೇಶದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕ ಬೇಡಿಕೆಯ ವಂದೇ ಭಾರತ್ ರೈಲು ಮಾರ್ಗ ತಿರುವನಂತಪುರಂ-ಕಾಸರಗೋಡು. ಗುರುವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸುತ್ತದೆ. 20 ಬೋಗಿಯ ರೈಲು ಈ ಮಾರ್ಗದಲ್ಲಿ ಸಂಚಾರ ಆರಂಭಿಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ರೈಲು ಕೇರಳ ರಾಜ್ಯದ 11 ಜಿಲ್ಲೆಗಳ ಮೂಲಕ ಸಂಚಾರವನ್ನು ನಡೆಸುತ್ತದೆ. ತಿರುವನಂತಪುರಂನಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು ಮಧ್ಯಾಹ್ನ 1.20ಕ್ಕೆ ಕಾಸರಗೋಡು ತಲುಪಲಿದೆ. ಕಾಸರಗೋಡಿನಿಂದ 2.30ಕ್ಕೆ ಹೊರಟು, ರಾತ್ರಿ 10.35ಕ್ಕೆ ತಿರುವನಂತಪುರಂ ತಲುಪುತ್ತದೆ.
ಪ್ರಧಾನಿ ನರೇಂದ್ರ ಮೋದಿ 2023ರಲ್ಲಿ ಈ ರೈಲು ಸೇವೆಯನ್ನು ಆರಂಭಿಸಿದ್ದರು. ತಿರುವನಂತಪುರಂ-ಕಾಸರಗೋಡು ರೈಲಿನಲ್ಲಿ ಚೇರ್ ಕಾರ್ ದರ 1,520 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ದರ 2,815 ರೂ. (ಕ್ಯಾಟರಿಂಗ್ ಶುಲ್ಕ ಸೇರಿ) ಇದೆ. ಕ್ಯಾಟರಿಂಗ್ ಸೇವೆಯನ್ನು ರದ್ದುಗೊಳಿಸುವ ಆಯ್ಕೆಯೂ ಪ್ರಯಾಣಿಕರಿಗೆ ಇದೆ.
ತಿರುವನಂತಪುರಂ-ಕಾಸರಗೋಡು ರೈಲು ಕರ್ನಾಟಕದ ಜನರಿಗೂ ಅನುಕೂಲವಾಗಲಿದೆ. ಕರ್ನಾಟಕ ಕರಾವಳಿಯ ಅನೇಕ ಜನರು ಕೇರಳಕ್ಕೆ ತೆರಳುತ್ತಾರೆ. ಅವರಿಗೆ ಮಂಗಳೂರು ಮೂಲಕ ಕಾಸರಗೋಡು ತಲುಪಿ ಅಲ್ಲಿಂದ ಈ ರೈಲಿನಲ್ಲಿ ಮುಂದೆ ಸಾಗಲು ಅನುಕೂಲವಾಗಲಿದೆ. ಕೇರಳ ಪ್ರವಾಸ ಕೈಗೊಳ್ಳುವ ಕರ್ನಾಟಕದ ಜನರೂ ಸಹ ಈ ರೈಲು ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.
ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ರೈಲಿಗೆ ಇರುವ ಬೇಡಿಕೆ ಗಮನಿಸಿದ್ದ ಕೇಂದ್ರ ಸರ್ಕಾರ 20 ಬೋಗಿಯ ರೈಲನ್ನು ಪೂರೈಕೆ ಮಾಡುವ ಭರವಸೆಯನ್ನು ಕೇರಳ ಸರ್ಕಾರಕ್ಕೆ ನೀಡಿತ್ತು. ತಿರುವನಂತಪುರಂ-ಕಾಸರಗೋಡು ಮಾರ್ಗ ಶೇ 200ರಷ್ಟು ಪ್ರಯಾಣಿಕರ ಬೇಡಿಕೆಯನ್ನು ಹೊಂದಿದೆ.
ಸದ್ಯ ಸಂಚಾರ ನಡೆಸುತ್ತಿರುವ 16 ಬೋಗಿಯ ರೈಲನ್ನು ಬದಲಾವಣೆ ಮಾಡಿ 20 ಬೋಗಿಯ ರೈಲು ಸಂಚಾರವನ್ನು ತಿರುವನಂತಪುರಂ-ಕಾಸರಗೋಡು ಮಾರ್ಗದಲ್ಲಿ ಆರಂಭಿಸಲಾಗುತ್ತದೆ. ಸದ್ಯ ಕೇರಳ ರಾಜ್ಯದಲ್ಲಿ ಎರಡು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ.












Click it and Unblock the Notifications