2.34 ಲಕ್ಷ ಟಿಕೆಟ್ ಬುಕ್; ರೈಲ್ವೆಗೆ 45 ಕೋಟಿ ಆದಾಯ
ನವದೆಹಲಿ, ಮೇ 14 : ಭಾರತೀಯ ರೈಲ್ವೆ ಆಯ್ದ ಮಾರ್ಗದಲ್ಲಿ ಸೂಪರ್ ಫಾಸ್ಟ್ ಪ್ರಯಾಣಿಕ ರೈಲುಗಳ ಸಂಚಾರವನ್ನು ಆರಂಭಿಸಿದೆ. ಮುಂದಿನ 7 ದಿನಗಳ ಕಾಲ ಸಂಚಾರ ನಡೆಸಲು 2.34 ಲಕ್ಷ ಜನರು ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ.
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇಶದಲ್ಲಿ ಪ್ರಯಾಣಿಕರ ರೈಲು ಸಂಚಾರ ಸಂಪೂರ್ಣ ರದ್ದಾಗಿತ್ತು. ವಿಶೇಷ ಪಾರ್ಸೆಲ್ ರೈಲು, ಗೂಡ್ಸ್ ರೈಲುಗಳು ಮಾತ್ರ ಸಂಚಾರವನ್ನು ನಡೆಸುತ್ತಿದ್ದವು.
ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು ತಮ್ಮ ತವರು ರಾಜ್ಯಗಳಿಗೆ ಸಂಚಾರ ನಡೆಸಲು ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿತ್ತು. ಸೋಮವಾರ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಬುಕ್ಕಿಂಗ್ ಆರಂಭಿಸಲಾಗಿತ್ತು.

ಮಂಗಳವಾರದಿಂದ ದೇಶದ ಆಯ್ದ ಮಾರ್ಗದಲ್ಲಿ ಸೂಪರ್ ಫಾಸ್ಟ್ ಪ್ರಯಾಣಿಕ ರೈಲುಗಳನ್ನು ಓಡಿಸಲು ಆರಂಭಿಸಲಾಗಿದೆ. ಬುಕ್ಕಿಂಗ್ ಆರಂಭಿಸಿದ ಮೊದಲ ದಿನವೇ 82,317 ಜನರು ಟಿಕೆಟ ಬುಕ್ ಮಾಡಿದ್ದರು. ರೈಲ್ವೆಗೆ 16 ಕೋಟಿ ಆದಾಯ ಬಂದಿತ್ತು.
ಮುಂದಿನ ಏಳು ದಿನಗಳ ಕಾಲ ಪ್ರಯಾಣ ಮಾಡಲು 2.34 ಲಕ್ಷ ಪ್ರಯಾಣಿಕರು ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಇದರಿಂದಾಗಿ ಭಾರತೀಯ ರೈಲ್ವೆಗೆ 45.30 ಕೋಟಿ ಆದಾಯ ಬಂದಿದೆ.
ಪ್ರಯಾಣಿಕರಿಗೆ ಆಸನ ವೈಟಿಂಗ್ ವ್ಯವಸ್ಥೆ ಇನ್ನೂ ಮಾಡಿಲ್ಲ. ಟಿಕೆಟ್ ಖಚಿತವಾದರೆ ಮಾತ್ರ ರೈಲು ನಿಲ್ದಾಣಕ್ಕೆ ಪ್ರವೇಶ ನೀಡಲಾಗುತ್ತದೆ. ಮೇ 22ರ ಬಳಿಕ ವೈಟಿಂಗ್ ಸೌಲಭ್ಯ ನೀಡಲಾಗುತ್ತದೆ ಎಂದು ರೈಲ್ವೆ ಹೇಳಿದೆ.
ಈ ವಿಶೇಷ ರೈಲುಗಳಲ್ಲಿ ಸಂಚಾರ ನಡೆಸಲು ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಪ್ರಯಾಣಿಕರು 90 ನಿಮಿಷ ಮೊದಲು ರೈಲು ನಿಲ್ದಾಣಕ್ಕೆ ಆಗಮಿಸಬೇಕು. ರೈಲು ಹತ್ತುವಾಗ, ಇಳಿದ ಮೇಲೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದೆ.
ಪ್ರಯಾಣಿಕರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಅವರಿಗೆ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ. ಅವರ ಟಿಕೆಟ್ ಖಚಿತವಾಗಿದ್ದರೆ ಪೂರ್ತಿ ಹಣವನ್ನು ವಾಪಸ್ ಮಾಡಲಾಗುತ್ತಿದೆ.
ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದೆ. ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.












Click it and Unblock the Notifications