ಬಿಹಾರದ ಸರನ್ ಜಿಲ್ಲೆಯಲ್ಲಿ ದೋಣಿ ಮುಳುಗಿ 18 ಮಂದಿ ನಾಪತ್ತೆ: 3 ಸಾವು!
ಪಾಟ್ನಾ ನವೆಂಬರ್ 2: ಬಿಹಾರದ ರಾಜಧಾನಿ ಪಾಟ್ನಾದಿಂದ ಪಶ್ಚಿಮಕ್ಕೆ 100 ಕಿಮೀ ದೂರದಲ್ಲಿರುವ ಸರನ್ ಜಿಲ್ಲೆಯ ಸರಯೂ ನದಿಯಲ್ಲಿ ದೋಣಿಯೊಂದು ಮುಳುಗಿ ಹದಿನೆಂಟು ಮಂದಿ ನಾಪತ್ತೆಯಾಗಿದ್ದಾರೆ.
ಉತ್ತರ ಪ್ರದೇಶದ ಗಡಿಯಿಂದ ಅನತಿ ದೂರದಲ್ಲಿರುವ ಮತಿಯಾರ್ ಘಾಟ್ ಬಳಿ ಕಳೆದ ದಿನ ಸಂಜೆ ಈ ಘಟನೆ ನಡೆದಿದೆ. ಈ ಅವಘಡ ನಡೆದಾಗ ದೋಣಿಯಲ್ಲಿ ಸುಮಾರು 24-25 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೋಣಿ ಮಗುಚಿ ಬಿದ್ದಾಗ ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ. ಉಳಿದವರು ಕಾಣದಂತೆ ನೀರಿನಲ್ಲಿ ಮುಳುಗಿ ಹೋಗಿದ್ದು, ಅವರನ್ನು ಪತ್ತೆ ಹಚ್ಚಲು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಘಟನೆ ಸಂಜೆ ಆಗಿರುವುದರಿಂದ ಕಾಣೆಯಾದವರ ಪತ್ತೆ ಕಾರ್ಯ ಸಾಧ್ಯವಾಗಿಲ್ಲ. ಇಂದು ಮತ್ತೆ ಕಾರ್ಯಚರಣೆ ಮುಂದುವರೆಯಲಿದೆ ಎಂದು ಮಾಂಝಿ ಪ್ರದೇಶದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ ಸರನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ತಿಳಿಸಿದರು.
"ಸಂಜೆ 6.30 ರ ಸುಮಾರಿಗೆ 18 ಜನರನ್ನು ಹೊತ್ತಿದ್ದ ದೋಣಿಯೊಂದು ಮಾಂಝಿ ಬ್ಲಾಕ್‌ನ ಮತಿಯಾರ್ ಘಾಟ್ ಬಳಿಯ ಸರಯು ನದಿಯಲ್ಲಿ ಮುಳುಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಮುಳುಗುಗಾರರಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ನಾವು ಸತ್ತವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಘಟನೆಯ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅಮನ್ ಸಮೀರ್ ಅವರು ಹೇಳಿದರು.
ಬೋಟ್ ತಿರುಗಿದಾಗ ದೋಣಿಯಲ್ಲಿದ್ದ ಜನರು ಹಠಾತ್ತನೆ ದೋಣಿಯ ಒಂದೇ ಬದಿಗೆ ಸೇರಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಗಳು ಸೂಚಿಸಿವೆ. ಆದರೆ ಜನ ಯಾಕೆ ಈ ರೀತಿ ಮಾಡಿದರು ಎಂಬುದು ತಿಳಿಯುತ್ತಿಲ್ಲ. ದೋಣಿ ಮುಳುಗಲು ನಿರ್ದಿಷ್ಟ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಮನ್ ಸಮೀರ್ ಹೇಳಿದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎರಡನೇ ದೊಡ್ಡ ದೋಣಿ ದುರಂತ ಇದಾಗಿದೆ. ಕಳೆದ ಸೆಪ್ಟೆಂಬರ್ 14 ರಂದು ಮುಜಾಫರ್‌ಪುರ ಜಿಲ್ಲೆಯ ಬಾಗ್ಮತಿ ನದಿಯಲ್ಲಿ ದೋಣಿಯೊಂದು ಮುಳುಗಿ 15 ಕ್ಕೂ ಹೆಚ್ಚು ಮಕ್ಕಳು ಮುಳುಗಿ ಸಾವನ್ನಪ್ಪಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ.












Click it and Unblock the Notifications