Manipur violence: ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ
ಮಣಿಪುರ ಮೇ 30: ರಾಜ್ಯದಲ್ಲಿ ಜನಾಂಗೀಯ ಸಂಘರ್ಷದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರ ಮಂಗಳವಾರ ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಹಿಂಸಾಚಾರದಲ್ಲಿ ಮಡಿದವರ ಕುಂಟುಬಸ್ಥರಿಗೆ 10 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಲ್ಲದೆ, ಮೃತರ ಕುಟುಂಬದ ಒಬ್ಬ ಸದಸ್ಯರಿಗೂ ಉದ್ಯೋಗ ನೀಡಲಾಗುವುದು ಎಂದು ಹೇಳಿದೆ. ಪರಿಹಾರದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸಮಾನವಾಗಿ ಭರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನಡುವೆ ನಡೆದ ಸಭೆಯಲ್ಲಿ ಪರಿಹಾರ ಘೋಷಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಜೊತೆಗೆ ವದಂತಿಗಳನ್ನು ಹೋಗಲಾಡಿಸಲು ದೂರವಾಣಿ ಸಂಖ್ಯೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಳೆದ 24 ತಾಸುಗಳಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ತಡರಾತ್ರಿ ಇಂಫಾಲ್‌ಗೆ ಆಗಮಿಸುವ ಕೆಲವೇ ಗಂಟೆಗಳ ಮೊದಲು ಕಿಡಿಗೇಡಿಗಳು ಸೇನೆಯ ಮೇಲೆ ಭಾರೀ ಗುಂಡಿನ ದಾಳಿ ನಡೆಸಿವೆ. ಸುರಕ್ಷತಾ ದೃಷ್ಟಿಯಿಂದ ಸೇನೆಯು ಸುರಕ್ಷತಾ ವಾಹನಗಳನ್ನು ಹೊರ ತೆಗೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದ ಪರಿಸ್ಥಿತಿ ಪರಾಮರ್ಶೆಗೆಂದು ಇಂಪಾಲ್‌ಗೆ ಬಂದಿಳಿದಿದ್ದು, ಅಲ್ಲಿಯೇ 4 ದಿನಗಳ ಕಾಲ ತಂಗಲಿದ್ದಾರೆ. ಬೇರೆ ಬೇರೆ ಗುಂಪುಗಳ ಜೊತೆ ಮಾತುಕತೆ ನಡೆಸಿ, ಪರಿಸ್ಥಿತಿ ತಣ್ಣಗಾಗಿಸುವುದಾಗಿ ಘೋಷಿಸಿದ್ದಾರೆ. ಆದರೆ ಇದು ಫಲಪ್ರದವಾಗುವ ಸಾಧ್ಯತೆ ಬಹಳ ಕಡಿಮೆ ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಪೂರ್ಣ ವಿರಾಮ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಇಂಫಾಲ್‌ಗೆ ಬಂದಿಳಿದ ಕೂಡಲೇ, ಗೃಹ ಸಚಿವ ಅಮಿತ್ ಶಾ, ನೇರವಾಗಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದರು. ಜೂನ್ 1 ರವರೆಗೆ ಅಲ್ಲಿಯೇ ತಂಗಲಿದ್ದು, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಬಗ್ಗೆ ಬೇರೆ ಬೇರೆ ಹಂತದ ಸಭೆಗಳನ್ನು ನಡೆಸಲಿದ್ದಾರೆ.
ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಕಳೆದ ಕೆಲ ದಿನಗಳಿಂದ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 40 ಕ್ಕೂ ಹೆಚ್ಚು ಕುಕಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ. ಕೇಂದ್ರದಿಂದ ಗೃಹ ಸಚಿವರು ಬಂದಿದ್ದಾರೆ ಎಂದ ಮಾತ್ರಕ್ಕೆ ಪ್ರಸ್ತುತ ಬೆಂಕಿಯನ್ನು ನಂದಿಸಲು ಅಥವಾ ಹೊಸ ಹೊಗೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಂಘರ್ಷದಲ್ಲಿರುವ ಎರಡೂ ಕಡೆಯವರು ಹೇಳುತ್ತಿದ್ದಾರೆ.
ಹಿಂಸಾಚಾರದ ಕಾರಣ ಇಂಫಾಲ್ ಕಣಿವೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳು, ಕಾರ್ಯಾಚರಣೆ ಮುಂದುವರೆಸಿವೆ. ಉದ್ರಿಕ್ತರನ್ನು ವಶಕ್ಕೆ ಪಡೆದು ಸಂಗ್ರಹಿಸಿಟ್ಟ ಶಸ್ತ್ರಾಸ್ತ್ರಗಳ ಜಪ್ತಿಯಲ್ಲಿ ತೊಡಗಿವೆ.












Click it and Unblock the Notifications