ವೈಎಸ್ ಶರ್ಮಿಳಾ ಸ್ಥಾಪನೆಯ ಹೊಸ ಪಕ್ಷದ ಹೆಸರು ನೋಂದಣಿ
ಹೈದರಾಬಾದ್, ಜೂನ್ 4: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರಿ ವೈಎಸ್ ಶರ್ಮಿಳಾ ಅವರು ಹೊಸ ಪಕ್ಷ ಸ್ಥಾಪನೆಯಲ್ಲಿ ನಿರತರಾಗಿದ್ದಾರೆ. ಶರ್ಮಿಳಾ ಅವರ ಪಕ್ಷದ ನೋಂದಣಿ ಮಾಡಿಸಿದ್ದಾರೆ.
ಜುಲೈ 8 ಅವರ ತಂದೆ, ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಜನ್ಮದಿನದಂದು ಹೊಸ ಪಕ್ಷದ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶರ್ಮಿಳಾ ಘೋಷಿಸಿದ್ದರು.
ವೈಎಸ್‌ಆರ್ ಕಾಂಗ್ರೆಸ್ ನೋಂದಣಿ ರದ್ದು ಕೋರಿದ್ದ ಅರ್ಜಿ ವಜಾ
ಅದರಂತೆ ಶರ್ಮಿಳಾ ಅವರ ಪಕ್ಷದ ಹೆಸರು, ಚಿನ್ಹೆ, ಧ್ವಜ ಮತ್ತು ಸಿದ್ಧಾಂತಗಳ ವಿವರಗಳನ್ನು ನೀಡಲಾಗುತ್ತದೆ. ಹಾಗೂ ಈ ಮೊದಲೇ ವರದಿಯಾದಂತೆ ವೈಎಸ್ ಆರ್ ತೆಲಂಗಾಣ ಪಕ್ಷ(YSRTP) ಎಂದು ನೋಂದಣಿ ಮಾಡಿಸಲಾಗಿದೆ. ತೆಲಂಗಾಣ ವೈಎಸ್ಸಾರ್ ಕಾಂಗ್ರೆಸ್(TYSRC) ಎಂಬ ಹೆಸರು ಕೂಡಾ ಕೇಳಿ ಬಂದಿತ್ತು.
ವರದಿಗಳ ಪ್ರಕಾರ ವಿ ರಾಜಗೋಪಾಲ್ ಅವರನ್ನು ಪಕ್ಷದ ಚೇರ್ಮನ್ ಆಗಿ ನೇಮಿಸಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಹೈದರಾಬಾದಿನ ಯೂಸುಫ್ ಗಢದ ನಿವಾಸಿ ರಾಜ ಗೋಪಾಲ್ ಅವರು ಜೂನ್ 16ರಂದು ಪಕ್ಷದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ತೆಲಂಗಾಣ ರಾಜ್ಯ ಉದಯಕ್ಕೆ ಕಾರಣವಾಗಿ ಸದ್ಯ ಆಡಳಿತದಲ್ಲಿರುವ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ವಿರುದ್ಧ ವೈಎಸ್ ಶರ್ಮಿಳಾ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.
ಏಪ್ರಿಲ್ 15 ರಿಂದ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ಶರ್ಮಿಳಾ, ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಿದ್ದರು. ತೆಲಂಗಾಣದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿರುವುದು, 90 ಲಕ್ಷಕ್ಕೂ ಅಧಿಕ ಉದ್ಯೋಗ ಖಾಲಿ ಇರುವುದು, ಕೋವಿಡ್ 19 ನಿರ್ವಹಣೆಯಲ್ಲಿ ವಿಫಲ ಮುಂತಾದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಶರ್ಮಿಳಾ ಯತ್ನಿಸಿದ್ದಾರೆ. ಕೋವಿಡ್ ಕಾರಣದಿಂದ ಹೊಸ ಪಕ್ಷ ಸ್ಥಾಪನೆ ಪ್ರಕ್ರಿಯೆ ವಿಳಂಬವಾಗಿದ್ದರೂ ನಿಗದಿಯಂತೆ ಜುಲೈ 8ರಂದು ಪಕ್ಷ ಘೋಷಣೆಯಾಗುವುದು ನಿಶ್ಚಿತವಾಗಿದೆ. ತೆಲಂಗಾಣದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶರ್ಮಿಳಾ ಅವರ ಹೊಸ ಪಕ್ಷ ಸ್ಪರ್ಧೆಗಿಳಿಯಲು ತಯಾರಿ ನಡೆಸುತ್ತಿದೆ.