ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಂದಳು!
ಹೈದರಾಬಾದ್, ಅಕ್ಟೋಬರ್ 29 : ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತಾಯಿಯನ್ನು ಹತ್ಯೆ ಮಾಡಿದ ಘಟನೆ ಹೈದರಾಬಾದ್ ಹೊರವಲಯದಲ್ಲಿ ನಡೆದಿದೆ. ಹತ್ಯೆ ನಡೆದ ಮನೆಯಲ್ಲಿಯೇ ಶವದ ಜೊತೆ ಮೂರು ದಿನ ಕಾಲ ಕಳೆದಿದ್ದಾರೆ.
ಹೈದರಾಬಾದ್ ಹೊರವಲಯದ ಮುನುಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಯುವಕರ ಜೊತೆ ಮಹಿಳೆ ಸಂಬಂಧ ಇಟ್ಟುಕೊಂಡಿದ್ದಳು. ತಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಪ್ರಿಯಕರನೊಂದಿಗೆ ಸೇರಿ ತಾಯಿಯನ್ನು ಹತ್ಯೆ ಮಾಡಿದ್ದಳು.
ರಾಮನ್ನಾಪೇಟ್ ರೈಲ್ವೆ ನಿಲ್ದಾಣದ ಬಳಿ ಸಿಕ್ಕ ಶವದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪುತ್ರಿಯೇ ಹತ್ಯೆ ಮಾಡಿದ್ದಾಳೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಪ್ರಿಯಕರ ಮತ್ತು ಹತ್ಯೆಯಾದ ಮಹಿಳೆಯ ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ರಿ ಇಬ್ಬರು ಯುವಕರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಒಬ್ಬನನ್ನು ರಾತ್ರಿ ಮನೆಗೆ ಕರೆದುಕೊಂಡು ಬಂದಿದ್ದಳು. ತಾಯಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಜೊತೆ ಜಗಳವಾಡಿ ಹತ್ಯೆ ಮಾಡಿದ್ದಳು. ಮೂರು ದಿನಗಳ ಕಾಲ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರು.
ಶವ ವಾಸನೆ ಬರಲು ಆರಂಭವಾದಾಗ ಪ್ರಿಯಕರನ ಜೊತೆ ಸೇರಿ ಅದನ್ನು ರೈಲ್ವೆ ಹಳಿ ಮೇಲೆ ಎಸೆದಿದ್ದರು. ಟ್ರಕ್ ಡ್ರೈವರ್ ಆಗಿದ್ದ ತಂದೆ ಮನೆಗೆ ಬಂದಾಗ ಬೀಗ ಹಾಕಿತ್ತು. ಮಗಳಿಗೆ ಪೋನ್ ಮಾಡಿದರೆ ತಾಯಿ ಕಾಣೆಯಾಗಿದ್ದು, ಆಕೆಯನ್ನು ಹುಡುಕಲು ಹೋಗಿದ್ದಾಗಿ ಹೇಳಿದ್ದಳು.
ಹಯತ್ನಾಗರ್ ಪೊಲೀಸರು ಶವದ ಬಗ್ಗೆ ತನಿಖೆ ಆರಂಭಿಸಿದಾಗ ಪುತ್ರಿ ಕೊಲೆ ಮಾಡಿರುವುದು ಪತ್ತೆಯಾಗಿದೆ. ಮತ್ತೊಬ್ಬ ಪ್ರಿಯಕರನ ಮನೆಯಲ್ಲಿದ್ದ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications