ದಿ ಕಾಶ್ಮೀರ್ ಫೈಲ್ಸ್ ನಿಂದ ಯಾರಿಗೆ ಏನು ಪ್ರಯೋಜನ?; ಇದು ಕೆಸಿಆರ್ ಬಿಟ್ಟ ವಾಗ್ಬಾಣ
ಹೈದ್ರಾಬಾದ್, ಮಾರ್ಚ್ 21: ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ನಿರ್ಮಿಸಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಯಾರಿಗೆ ಏನು ಪ್ರಯೋಜನವಿದೆ? ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪ್ರಶ್ನಿಸಿದ್ದಾರೆ.
ಸೋಮವಾರದ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಯಾವುದೇ ಸರ್ಕಾರ ಪ್ರಗತಿಪರವಾಗಿದ್ದರೆ, "ಇರಿಗೇಷನ್ ಫೈಲ್ಸ್" (ನೀರಾವರಿಗೆ ಸಂಬಂಧಿಸಿದಂತೆ), "ಎಕನಾಮಿಕ್ ಫೈಲ್ಸ್" (ಆರ್ಥಿಕತೆಗೆ ಸಂಬಂಧಿಸಿದಂತೆ) ಅನ್ನು ನಿರ್ಮಾಣ ಮಾಡಬೇಕಿತ್ತು ಎಂದಿದ್ದಾರೆ.
"ಅಸಲಿಗೆ ದಿ ಕಾಶ್ಮೀರಿ ಫೈಲ್ಸ್ ಯಾರಿಗೆ ಬೇಕಾಗಿದೆ. ದೆಹಲಿಯಲ್ಲಿ ಮತ್ತು ಕಾಶ್ಮೀರದಲ್ಲಿರುವ ಪಂಡಿತರೇ ಗೊತ್ತಿದೆ. ಇದನ್ನೆಲ್ಲ ಕೆಲವರು ಕೇವಲ ಮತಕ್ಕಾಗಿ ಮಾಡುತ್ತಿದ್ದಾರೆ, ಇದರಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರಿಗೂ ಗೊತ್ತಿದೆ," ಎಂದು ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಲಖೀಂಪುರ್ ಫೈಲ್ಸ್ ಚಿತ್ರ ಏಕೆ ಮಾಡಬಾರದು ಎಂದ ಅಖಿಲೇಶ್:
"ಜಮ್ಮು ಕಾಶ್ಮೀರದ ಬಗ್ಗೆ ಕಾಶ್ಮೀರ್ ಫೈಲ್ಸ್ ಎಂಬ ಚಿತ್ರ ಮಾಡಿದ್ದಾರೆ. ಹಾಗಿದ್ದರೆ ಲಖೀಂಪುರದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಘಟನೆಗೆ ಸಂಬಂಧಿಸಿದಂತೆ ಲಖೀಂಪುರ್ ಫೈಲ್ತ್ ಅನ್ನು ಏಕೆ ಮಾಡಬಾರದು," ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಶ್ನೆ ಮಾಡಿದ್ದರು. ಕಳೆದ 2021ರ ಅಕ್ಟೋಬರ್ 3ರಂದು, ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿ ವಾಪಸ್ಸಾಗುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರೊಬ್ಬರ ಪುತ್ರನ ಜೀಪ್ ಹರಿಸಿದ ನಂತರ ಲಖಿಂಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ದೇಶದಲ್ಲಿ ಸದ್ದು ಮಾಡುತ್ತಿರುವ "ದಿ ಕಾಶ್ಮೀರ್ ಫೈಲ್ಸ್"
ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಈ ಚಲನಚಿತ್ರದ ಕಳೆದ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. 1990ರ ದಶಕದ ವೇಳೆಯಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು, ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಯಿತು ಎಂಬುದರ ಬಗ್ಗೆ ಚಿತ್ರಿಸಲಾಗಿದೆ. ಅದಲ್ಲದೇ ರಾತ್ರೋರಾತ್ರಿ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಓಡಿಸುವುದಕ್ಕೆ ನಡೆಸಿದ ದೌರ್ಜನ್ಯದ ಕುರಿತು ಎತ್ತಿ ತೋರಿಸಲಾಗಿದೆ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಹಾಗೂ ಪ್ರಕಾಶ್ ಬೆಳವಾಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications