ಟ್ರಾಫಿಕ್ ನಿಯಮ ಮೀರಿದ ಹಿರಿಯ ನಟನ ಡ್ರೈವಿಂಗ್ ಲೈಸನ್ಸ್ ರದ್ದು?
ಹೈದರಾಬಾದ್, ಡಿಸೆಂಬರ್ 01: ತೆಲಂಗಾಣ ಟ್ರಾಫಿಕ್ ಪೊಲೀಸರು, ಹಿರಿಯ ನಟರೊಬ್ಬರ ವಾಹನ ಚಾಲನೆ ಪರವಾನಗಿ ಪತ್ರವನ್ನು ರದ್ದು ಮಾಡಲು ಮುಂದಾಗಿದೆ. ಪದೇ ಪದೇ ವಾಹನ ಚಾಲನೆ ನಿಯಮವನ್ನು ಮೀರಿದ್ದಕ್ಕೆ ನಟ ಬೆಲೆ ತೆರಬೇಕಾಗಿದೆ.
ವೇಗವಾಗಿ ಕಾರು ಚಾಲನೆ ಮಾಡಿ ಅನೇಕ ಬಾರಿ ಸಿಕ್ಕಿ ಹಾಕಿಕೊಂಡು ದಂಡ ತೆತ್ತಿರುವ ನಟ ''ಅಂಕುಶಂ'' ಖ್ಯಾತಿಯ ಹಿರಿಯ ನಟ ರಾಜಶೇಖರ್. ಸುಮಾರು 21 ಬಾರಿ ವೇಗದ ಚಾಲನೆ ಮಾಡಿದ್ದು, ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಕಾರು ಚಲಿಸಿದ್ದಾರೆ. ಹೀಗಾಗಿ ಅವರ ಲೈಸನ್ಸ್ ಮುಟ್ಟುಗೋಲು ಹಾಕಿಕೊಳ್ಳಲು ಸಂಚಾರಿ ಪೊಲೀಸ್ ಇಲಾಖೆ ಮುಂದಾಗಿದೆ.
ಮೋಟರು ವಾಹನ ಕಾಯ್ದೆ ತಿದ್ದುಪಡಿಯಾದ ಬಳಿಕ ಟ್ರಾಫಿಕ್ ನಿಯಮ ಮೀರಿದರೆ ಭಾರಿ ದಂಡ ತೆರಬೇಕಾಗುತ್ತದೆ. ಪದೇ ಪದೇ ನಿಯಮ ಮೀರಿದರೆ ದಂಡ, ಲೈಸನ್ಸ್ ರದ್ದು, ಜೈಲುಶಿಕ್ಷೆ ಹೀಗೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ರಾಜಶೇಖರ್ ಅವರು ಸುಮಾರು 160 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ನಗರ ವ್ಯಾಪ್ತಿಯಲ್ಲಿ ವಾಹನ ಚಲಾಯಿಸಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. 60 ಕಿ. ಮೀ ಪ್ರತಿ ಗಂಟೆ ವೇಗಮಿತಿ ಇರುವೆಡೆಗಳಲ್ಲಿ 100ಪ್ಲಸ್ ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಡ್ರೈವ್ ಮಾಡಿರುವುದಕ್ಕೆ ಸಾಕ್ಷಿಯಿದೆ.
ಇತ್ತೀಚೆಗೆ ಹೈದರಾಬಾದಿನ ರಿಂಗ್ ರಸ್ತೆಯಲ್ಲಿ ಡಿವೈಡರ್ ಗೆ ರಾಜಶೇಖರ್ ಕಾರು ಗುದ್ದಿತ್ತು. ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲದಿದರೂ ಅವರ ವಿರುದ್ಧ ಅಪಾಯಕಾರಿಯಾಗಿ ಚಾಲನೆ ಎಂದು ಐಪಿಸಿ ಸೆಕ್ಷನ್ 279, 337 ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಡಿಸಿಪಿ (ಟ್ರಾಫಿಕ್) ವಿಜಯ್ ಕುಮಾರ್ ಅವರು ಈ ಬಗ್ಗೆ ವರದಿ ನೀಡಿದ್ದು, ಸಾರಿಗೆ ಇಲಾಖೆ ಸದ್ಯದಲ್ಲೇ ಲೈಸನ್ಸ್ ರದ್ದು ಬಗ್ಗೆ ಆದೇಶ ಹೊರಡಿಸಲಿದೆ.












Click it and Unblock the Notifications