ತೆಲಂಗಾಣ ಎನ್‌ಕೌಂಟರ್: ಡಿ.9ರವರೆಗೂ ಅಂತ್ಯಸಂಸ್ಕಾರ ಮಾಡದಂತೆ ಸೂಚನೆ
ಹೈದರಾಬಾದ್, ಡಿಸೆಂಬರ್ 9: ತೆಲಂಗಾಣದಲ್ಲಿ ಶುಕ್ರವಾರ ಮುಂಜಾನೆ ಎನ್‌ಕೌಂಟರ್‌ಗೆ ಬಲಿಯಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಮೃತದೇಹಗಳನ್ನು ಡಿ. 9ರ ಸಂಜೆ 6 ಗಂಟೆಯವರೆಗೂ ಕಾಪಾಡುವಂತೆ ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಅಲ್ಲದೆ, ಆರೋಪಿಗಳ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಅದರ ಸಂಪೂರ್ಣ ವಿಡಿಯೋವನ್ನು ಸಿ.ಡಿ ಅಥವಾ ಪೆನ್‌ಡ್ರೈವ್‌ನಲ್ಲಿ ಮಹಬೂಬನಗರದ ಮುಖ್ಯ ಜಿಲ್ಲಾ ನ್ಯಾಯಾಧೀಶರಿಗೆ ಒಪ್ಪಿಸಬೇಕು ಎಂದು ನಿರ್ದೇಶಿಸಿದೆ.
ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್ಸ್ (ಎನ್‌ಎಪಿಎಂ), ಮಾನವ ಹಕ್ಕುಗಳ ಸಂಘಟನೆ ಮತ್ತು ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ತೆಲಂಗಾಣ-ಆಂಧ್ರಪ್ರದೇಶದ ವೈದ್ಯರಲ್ಲದೆ, ಮರಣೋತ್ತರ ಪರೀಕ್ಷೆಯ ತಜ್ಞರ ವಿಶೇಷ ತಂಡವನ್ನು ರಚಿಸಬೇಕು. ಮರಣೋತ್ತರ ಪರೀಕ್ಷೆಯ ಸ್ವತಂತ್ರ ವಿಡಿಯೋ ಚಿತ್ರೀಕರಣ ಮಾಡಬೇಕು. ಇದಕ್ಕೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಘಟನೆಯ ಸ್ವತಂತ್ರ ಪರಿಶೀಲನೆಗೆ ವಿಶೇಷ ವಿಧಿವಿಜ್ಞಾನ ತಂಡವನ್ನು ರಚಿಸಬೇಕು. ಇರುವ ಕಾನೂನು ಪ್ರಕ್ರಿಯೆಗಳನ್ನು ಮೀರಿ ಇಂತಹ ಹತ್ಯೆಗಳನ್ನು ನಡೆಸುವ ಮೂಲಕ ನ್ಯಾಯ ನೀಡುತ್ತೇವೆ ಎಂದು ಆಲೋಚಿಸುವುದು ಕೂಡ ಹೀನಾಯವಾಗಿದೆ. ಈ ಹತ್ಯೆ ಅನಾಗರಿಕ ಮತ್ತು ಕ್ರೂರ ಎಂದು ಆರೋಪಿಸಿದ್ದಾರೆ.
ಈ ಎನ್‌ಕೌಂಟರ್ ಹಿಂದಿರುವ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಸರ್ಕಾರ ತನ್ನದೇ ವೀಕ್ಷಕರನ್ನು ಕಳುಹಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೂಡ ಮನವಿ ಮಾಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಲಾಗಿದೆ. ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಆರೋಪಿಗಳ ಮೃತದೇಹ ಇರಿಸಿರುವ ಮಹಬೂಬನಗರ ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಲಿದ್ದಾರೆ.












Click it and Unblock the Notifications