ತೆಲುಗಿನ ಖ್ಯಾತ ಕವಿ, ಜ್ಞಾನಪೀಠ ಪುರಸ್ಕೃತ ನಾರಾಯಣ ರೆಡ್ಡಿ ನಿಧನ
ಹೈದರಾಬಾದ್, ಜೂನ್ 12: ತೆಲುಗಿನ ಹೆಸರಾಂತ ಕವಿ, ಜ್ಞಾನಪೀಠ ಪುರಸ್ಕೃತ ಸಿಂಗಿರೆಡ್ಡಿ ನಾರಾಯಣ ರೆಡ್ಡಿ ಅವರು ಹೈದರಾಬಾದ್ ನಲ್ಲಿ ಸೋಮವಾರ ನಿಧನರಾಗಿದ್ದಾರೆ. ಮೃತರಿಗೆ ಎಂಬತ್ತೈದು ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 1931ರಲ್ಲಿ ಹನುಮಾಜಿ ಪೇಟ್ ನಲ್ಲಿ ಜನಿಸಿದ ನಾರಾಯಣ ರೆಡ್ಡಿ ಅವರು ತೆಲುಗು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವರ ವಿಶ್ವಂಬರ ಎಂಬ ಸಾಹಿತ್ಯಕೃತಿಗೆ 1988ರಲ್ಲಿ ಜ್ಞಾನಪೀಠ ಪುರಸ್ಕೃತರಾದರು.

ರೆಡ್ಡಿ ಅವರು ತುಂಬ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಕೃಷಿ ಆರಂಭಿಸಿದವರು. ತೆಲುಗು ಸಿನಿಮಾಗಳಿಗಾಗಿ ಹಲವು ಹಾಡುಗಳನ್ನು ಸಹ ರಚಿಸಿದ್ದಾರೆ. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ತೆಲುಗು ಸಾಹಿತ್ಯದಲ್ಲಿ ಎಂಎ., ಪಿಎಚ್.ಡಿ ಪೂರ್ಣಗೊಳಿಸಿದ ರೆಡ್ಡಿ ಅವರು, ಅದೇ ವಿವಿಯ ಕಲಾ ಕಾಲೇಜಲ್ಲಿ ಪ್ರೊಫೆಸರ್ ಆಗಿ ವೃತ್ತಿ ಅರಂಭಿಸಿದರು.
ಆ ನಂತರ ನಿಜಾಮ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಅಧ್ಯಾಪಕ ವೃತ್ತಿಯಲ್ಲಿರುವಾಗಲೂ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದರು. ಜ್ಞಾನಪೀಠ ಪಡೆದ ತೆಲುಗಿನ ಎರಡನೇ ಸಾಹಿತಿ ನಾರಾಯಣ ರೆಡ್ಡಿ ಅವರು. ರಾಜ್ಯ ಸಭಾ ಸದಸ್ಯರಾಗಿಯೂ ಅವರು ಗಮನ ಸೆಳೆದಿದ್ದರು.












Click it and Unblock the Notifications