ಆಫ್ರಿಕಾದ ಅತಿ ಎತ್ತರದ ಶಿಖರ ಏರಿದ ಹೈದರಾಬಾದ್ ಬಾಲಕನ ಸಾಧನೆಗೆ ಸಚಿವರ ಶ್ಲಾಘನೆ
ಹೈದರಾಬಾದ್, ಮಾರ್ಚ್ 19: ಆಫ್ರಿಕಾದ ಅತ್ಯಂತ ಎತ್ತರದ ಕಿಲಿಮಂಜಾರೊ ಶಿಖರ ಏರುವ ಮೂಲಕ ಹೈದರಾಬಾದ್‌ನ ಏಳು ವರ್ಷದ ಬಾಲಕ ವಿರಾಟ್ ಚಂದ್ರ, ಕಿಲಿಮಂಜಾರೊ ಶಿಖರ ಏರಿದ ಅತ್ಯಂತ ಕಿರಿಯರಲ್ಲಿ ಒಬ್ಬನಾಗಿದ್ದಾನೆ. ಈ ಸಾಧನೆ ಮೂಲಕ ಗಮನ ಸೆಳೆದು ದೇಶಕ್ಕೆ ಹೆಮ್ಮೆ ತಂದಿದ್ದಾನೆ.
ವಿರಾಟ್ ಚಂದ್ರ ಮಾರ್ಚ್ 6ರಂದು ಕಿಲಿಮಂಜಾರೊ ಶಿಖರವನ್ನು ತನ್ನ ಕೋಚ್ ಭರತ್ ತಮ್ಮಿನೇನಿ ಅವರೊಂದಿಗೆ ಏರಿದ್ದ. ಒಂದು ತಿಂಗಳ ಅಭ್ಯಾಸದ ಫಲವಾಗಿ 19,341 ಅಡಿ ಎತ್ತರದ ಈ ಶಿಖರ ಏರುವ ಸಾಧನೆ ಮಾಡಿದ್ದ.
ಬಾಲಕನ ಈ ಸಾಧನೆಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೊಂಡಾಡಿದ್ದಾರೆ. ವಿರಾಟ್ ಚಂದ್ರ ಕುರಿತು ಟ್ವೀಟ್ ಮಾಡಿರುವ ಅವರು, ಏಳು ವರ್ಷದ ಈ ಬಾಲಕ ಮೌಂಟ್ ಕಿಲಿಮಂಜಾರೋ ಏರುವ ಮೂಲಕ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಅಲ್ಲಿ ತ್ರಿರಂಗ ಧ್ವಜ ಹಾರಿಸಿ ನಮಗೆ ಕೀರ್ತಿ ತಂದಿದ್ದಾನೆ. ಈ ಪ್ರೋತ್ಸಾಹಕ್ಕೆ ವಿರಾಟ್ ಪೋಷಕರಿಗೂ ಧನ್ಯವಾದ ಎಂದು ಶ್ಲಾಘಿಸಿದ್ದಾರೆ.

ಶಿಖರ ಏರಿದ ತನ್ನ ಅನುಭವ ಬಿಚ್ಚಿಟ್ಟಿರುವ ವಿರಾಟ್, "ಮೊದಲು ನನಗೆ ಭಯ ಎನ್ನಿಸಿತು. ಆದರೆ ನನಗೆ ಗುರಿ ಮುಟ್ಟಬೇಕು ಎಂಬ ಬಯಕೆ ಜೊತೆಗಿತ್ತು. ನನ್ನ ಸೋದರ ಸಂಬಂಧಿಗಳಿಗೆ ಟ್ರೆಕಿಂಗ್ ಎಂದರೆ ಇಷ್ಟ. ಟ್ರೆಕಿಂಗ್ ಬಗ್ಗೆ ಅವರ ಅನುಭವವನ್ನು ಕೇಳುತ್ತಿದ್ದೆ. ಆಗ ನಾನು ಏಕೆ ಶಿಖರ ಏರಬಾರದು ಎನಿಸಿತು. ಈ ಬಗ್ಗೆ ಅಪ್ಪ ಅಮ್ಮನ ಜೊತೆ ಮಾತನಾಡಿದೆ. ಅವರು ಭರತ್ ಎಂಬುವರ ಬಳಿ ಅಭ್ಯಾಸಕ್ಕೆ ಸೇರಿಸಿದರು. ಒಂದು ತಿಂಗಳ ತರಬೇತಿ ನಂತರ ಶಿಖರ ಏರಲು ಸಿದ್ಧವಾದೆ. ಈಗ ತುಂಬಾ ಸಂತೋಷವೆನಿಸುತ್ತಿದೆ" ಎಂದಿದ್ದಾನೆ.
ಫೆಬ್ರವರಿಯಲ್ಲಿ ಆಂಧ್ರಪ್ರದೇಶದ 9 ವರ್ಷದ ಬಾಲಕಿ ಕಡಪಲ ರಿತ್ವಿಕಾ ಶ್ರೀ ಕಿಲಿಮಂಜಾರೊ ಏರಿದ್ದಳು. 2018ರ ಅಕ್ಟೋಬರ್‌ನಲ್ಲಿ ನ್ಯೂ ಮೆಕ್ಸಿಕೋದ ಆರು ವರ್ಷದ ಬಾಲಕ ಕೋಲ್ಟನ್ ಟ್ಯಾನರ್ ಕಿಲಿಮಂಜಾರೊ ಏರಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದ.












Click it and Unblock the Notifications