Breaking; ರಾಹುಲ್ ಗಾಂಧಿ ಭೇಟಿಗೆ ಅವಕಾಶ ನೀಡದ ಉಸ್ಮಾನಿಯಾ ವಿವಿ
ಹೈದರಾಬಾದ್, ಮೇ 02; ಕಾಂಗ್ರೆಸ್ ನಾಯಕ ರಾಹುಲ್ ಭೇಟಿಗೆ ತೆಲಂಗಾಣದ ಉಸ್ಮಾನಿಯಾ ವಿಶ್ವವಿದ್ಯಾಲಯ ಅವಕಾಶ ನಿರಾಕರಿಸಿದೆ. ವಿಶ್ವವಿದ್ಯಾಲಯದ ತೀರ್ಮಾನ ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಯಾವುದೇ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲ ಎಂದು ಹೇಳಿರುವ ಕುಲಪತಿಗಳು ಸಂಸದ ರಾಹುಲ್ ಗಾಂಧಿ ಕ್ಯಾಂಪಸ್‌ಗೆ ಭೇಟಿ ನೀಡಲು ಅವಕಾಶ ನಿರಾಕರಿಸಿದ್ದಾರೆ.
ಮೇ 6 ಮತ್ತು 7ರಂದು ರಾಹುಲ್ ಗಾಂಧಿ ತೆಲಂಗಾಣ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ವಾರಂಗಲ್‌ನಲ್ಲಿ 5 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ಪಕ್ಷ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದ ಭೇಟಿಯ ವೇಳೆ ರಾಹುಲ್ ಗಾಂಧಿ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೂ ಭೇಟಿ ನೀಡಲು ಬಯಸಿದ್ದರು. ಆದರೆ ವಿಶ್ವವಿದ್ಯಾಲಯ ಭೇಟಿಗೆ ಅವಕಾಶ ನಿರಾಕರಿಸಿದೆ.
ಸೋಮವಾರ ವಿಶ್ವವಿದ್ಯಾಲಯದ ತೀರ್ಮಾನ ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ತೆಲಂಗಾಣದ ಕಾಂಗ್ರೆಸ್ ಘಟಕ ವಿಶ್ವವಿದ್ಯಾಲಯಕ್ಕೆ ರಾಹುಲ್ ಗಾಂಧಿ ಕರೆತರುತ್ತೇವೆ ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ ಎಂದು ಹೇಳಿದೆ.
ರಾಹುಲ್ ಗಾಂಧಿ ಭೇಟಿ ನಿರಾಕರಿಸಿದ ಹಿಂದೆ ತೆಲಂಗಾಣದ ಕೆ. ಚಂದ್ರಶೇಖರರಾವ್ ನೇತೃತ್ವದ ಟಿಆರ್‌ಎಸ್ ಪಕ್ಷದ ಕೈವಾಡವಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಇನ್ನು ಪ್ರತಿಭಟನೆ ನಡೆಸುತ್ತಿದ್ದ ಸುಮಾರು 18 ಎನ್‌ಎಸ್‌ಯುಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿ ಮಾತನಾಡಿ, "ಕೆಸಿಆರ್ ಮತ್ತು ಕೆಟಿಆರ್ ಕಂಪನಿಗಳಿಗೆ ರಾಹುಲ್ ಗಾಂಧಿ ಬಗ್ಗೆ ಭಯವೇಕೆ?" ಎಂದು ಪ್ರಶ್ನಿಸಿದ್ದಾರೆ. ಎನ್‌ಎಸ್‌ಯುಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿದ್ದಾರೆ.












Click it and Unblock the Notifications